HomeIndiaʼವಿವಾಹ ಎಂದರೆ ಕೇವಲ ಸಂತಾನೋತ್ಪತ್ತಿಯಷ್ಟೇ ಅಲ್ಲʼ ; ಪತಿ ವಿಚ್ಛೇದನ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಮಹತ್ವದ...

ʼವಿವಾಹ ಎಂದರೆ ಕೇವಲ ಸಂತಾನೋತ್ಪತ್ತಿಯಷ್ಟೇ ಅಲ್ಲʼ ; ಪತಿ ವಿಚ್ಛೇದನ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು !

ಮಕ್ಕಳಾಗದಿರುವುದು ಅಥವಾ ಸಂತಾನಹೀನತೆ ಎನ್ನುವುದು ಕೇವಲ ಹೆಂಡತಿಯ ತಪ್ಪಾಗಲು ಸಾಧ್ಯವಿಲ್ಲ ಹಾಗೂ ದಂಪತಿಗಳಿಗೆ ಮಕ್ಕಳಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಅದನ್ನು ದಾಂಪತ್ಯದ ಅಪರಾಧ ಅಥವಾ ‘ಕ್ರೌರ್ಯ’ (Cruelty) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ವೀಕ್ಷಣೆ ಮಾಡಿದೆ.

ನ್ಯಾಯಾಲಯದ ಪ್ರಮುಖ ವೀಕ್ಷಣೆ

ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಎಂ.ಡಿ. ಸುಮತಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಪತಿಯೊಬ್ಬರು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ ಈ ತೀರ್ಪು ನೀಡಿದೆ. “ವಿವಾಹದ ಏಕೈಕ ಉದ್ದೇಶ ಸಂತಾನೋತ್ಪತ್ತಿ ಮಾತ್ರವೇ ಆಗಿರಲು ಸಾಧ್ಯವಿಲ್ಲ. ಮಗುವಾಗಲಿಲ್ಲ ಎಂಬ ಕಾರಣಕ್ಕೆ ದಂಪತಿಗಳಲ್ಲಿ ಯಾರೊಬ್ಬರನ್ನೂ ವಿವಾಹ ಸಂಬಂಧದಲ್ಲಿ ವಿಫಲರಾದವರು ಎಂದು ಬಿಂಬಿಸಲು ಅಥವಾ ದೂಷಿಸಲು ಬರುವುದಿಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದ ಹಿನ್ನೆಲೆ

2007ರಲ್ಲಿ ವಿವಾಹವಾಗಿದ್ದ ದಂಪತಿಗಳ ನಡುವೆ ಕ್ರಮೇಣ ಭಿನ್ನಾಭಿಪ್ರಾಯ ಮೂಡಿತ್ತು. ಪತಿಯು ತನ್ನ ಪತ್ನಿ ತನ್ನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ, ಹಲ್ಲೆ ನಡೆಸಿದ್ದಾರೆ ಹಾಗೂ ಸಂಸಾರ ನಡೆಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಆದರೆ ಪತ್ನಿಯು ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದು, ತಾನು ಮಗುವನ್ನು ಪಡೆಯುವ ಆಸೆಯಿಂದ ಮತ್ತು ದಾಂಪತ್ಯ ಜೀವನವನ್ನು ಉಳಿಸಿಕೊಳ್ಳಲು ಗರ್ಭಾಶಯದ ಶಸ್ತ್ರಚಿಕಿತ್ಸೆ ಹಾಗೂ ಸುದೀರ್ಘ ಫಲವತ್ತತೆ (Fertility) ಚಿಕಿತ್ಸೆಗೆ ಒಳಪಟ್ಟಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಹೆಣ್ಣಿನ ನೋವನ್ನು ಗುರುತಿಸಿದ ಹೈಕೋರ್ಟ್

ಫಲವತ್ತತೆ ಚಿಕಿತ್ಸೆಯ ಸಮಯದಲ್ಲಿ ಮಹಿಳೆಯು ಎದುರಿಸುವ ದೈಹಿಕ ಹಾಗೂ ಮಾನಸಿಕ ಯಾತನೆಯನ್ನು ಉಲ್ಲೇಖಿಸಿದ ಹೈಕೋರ್ಟ್, “ಹಾರ್ಮೋನ್ ಚಿಕಿತ್ಸೆ, ಪದೇ ಪದೇ ರಕ್ತ ಪರೀಕ್ಷೆ, ಸ್ಕ್ಯಾನಿಂಗ್, ನೋವಿನ ಶಸ್ತ್ರಚಿಕಿತ್ಸೆಗಳು ಹಾಗೂ ಭರವಸೆ-ನಿರಾಶೆಗಳ ನಡುವಿನ ಮಾನಸಿಕ ಆತಂಕವನ್ನು ಮಹಿಳೆಯೊಬ್ಬಳು ಅನುಭವಿಸುತ್ತಾಳೆ. ಇಷ್ಟೆಲ್ಲಾ ನೋವನ್ನು ಸಹಿಸಿಕೊಂಡು ಸಂಸಾರ ಉಳಿಸಿಕೊಳ್ಳಲು ಯತ್ನಿಸುವ ಪತ್ನಿಯನ್ನು, ಆಕೆ ದಾಂಪತ್ಯವನ್ನು ತೊರೆದಿದ್ದಾಳೆ ಅಥವಾ ಕ್ರೌರ್ಯ ಎಸಗಿದ್ದಾಳೆ ಎಂದು ಹೇಳುವುದು ಸಂಪೂರ್ಣ ತಪ್ಪು” ಎಂದು ಅಭಿಪ್ರಾಯಪಟ್ಟಿದೆ.

ಪತಿಯು ಮಾಡಿದ ಹಲ್ಲೆ ಮತ್ತು ಅವಮಾನದ ಆರೋಪಗಳನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದ ನ್ಯಾಯಪೀಠವು, ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದು, ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular