ದೊಡ್ಡಬಳ್ಳಾಪುರ: ಕಸ ವಿಲೇವಾರಿ ಘಟಕದಲ್ಲಿ ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ MSGP ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅ.2ರಂದು ನಡೆದಿದೆ.
ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ ಕಾಡತಿಪ್ಪೂರು ಗ್ರಾಮದ 45 ವರ್ಷದ ಅರಸಮ್ಮ ಎಂದು ಗುರುತಿಸಲಾಗಿದೆ. ಅರಸಮ್ಮ ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು.
ಬೆಂಗಳೂರಿನಿಂದ ಸಂಗ್ರಹಿಸಿ ತರಲಾಗುವ ತ್ಯಾಜ್ಯವನ್ನು MSGP ಘಟಕದಲ್ಲಿ ವಿಂಗಡಣೆ ಹಾಗೂ ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಎಂದಿನಂತೆ ಅ.2ರ ಬೆಳಗ್ಗೆ ಅರಸಮ್ಮ ಅವರು ಕೆಲಸಕ್ಕೆ ತೆರಳಿದ್ದು, ಕಸ ವಿಂಗಡಣೆ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಯಂತ್ರಕ್ಕೆ ಸಿಲುಕಿಕೊಂಡಿದ್ದಾರೆ. ಯಂತ್ರಕ್ಕೆ ಸಿಲುಕಿದ ಪರಿಣಾಮ ಅರಸಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಗೆ ನಿಖರ ಕಾರಣ, ಯಂತ್ರದ ಸುರಕ್ಷತಾ ವ್ಯವಸ್ಥೆ ಹಾಗೂ ಕೆಲಸದ ವೇಳೆ ಕೈಗೊಳ್ಳಲಾಗಿದ್ದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಘಟನೆಯಿಂದ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ ಮತ್ತು ಯಂತ್ರೋಪಕರಣಗಳ ನಿರ್ವಹಣೆ ಕುರಿತು ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ತನಿಖೆಯ ಬಳಿಕ ಅಪಘಾತಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಮೃತ ಅರಸಮ್ಮ ಪುತ್ರಿಗೆ ಕಸ ವಿಲೇವಾರಿ ಘಟಕದ ಮಾಲೀಕರಿಂದ ಸ್ಥಳೀಯರು ಪರಿಹಾರ ಕೊಡಿಸಿದ್ದಾರೆ.
ನ್ಯಾಯಾಂಗ ನಿಂದನೆ ಆರೋಪ: ಸಿಎಂ, ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಮುಖ್ಯ ಆಯುಕ್ತರಿಗೆ ಬಿಜೆಪಿ ಮನವಿ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಸಂಪುಟ ಸಭೆಯನ್ನು ರದ್ದು ಮಾಡಿ, ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದ್ದಾರೆ. ಜವಾಬ್ದಾರಿಯುತ ಮುಖ್ಯಮಂತ್ರಿಯೇ ನ್ಯಾಯಾಲಯದ ಆದೇಶ ಉಲ್ಲಂಘಿಸಿರುವುದು ಖಂಡನೀಯ. ಆದ್ದರಿಂದ ನ್ಯಾಯಾಂಗ ನಿಂದನೆ ಮಾಡಿದ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಪೊಲೀಸ್ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಸಿ.ಕೆ.ರಾಮಮೂರ್ತಿ, ಬೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಮಾನ್ಯ ಉಚ್ಛ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ರಾಜಕೀಯ ಪ್ರತಿಭಟನೆ ನಡೆಸಲು ಅವಕಾಶ ನೀಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ದಿನಾಂಕ 01.10.2026ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಕಾಂಗ್ರೆಸ್ ರಾಜಕೀಯ ಮುಖಂಡರೊಂದಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ/ಪ್ರತಿಭಟನೆ ನಡೆಸಿರುವ ಘಟನೆ ಅತ್ಯಂತ ಗಂಭೀರವಾಗಿದ್ದು, ಈ ಕುರಿತು ನಮ್ಮ ತೀವ್ರ ಆಕ್ಷೇಪವನ್ನು ದಾಖಲಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠವು ಆದೇಶ ಮಾಡಿ ಫ್ರೀಡಂ ಪಾರ್ಕ್ ಹೊರತಾಗಿ ಬೇರೆ ಕಡೆ ಧರಣಿ/ಪ್ರತಿಭಟನೆ ನಡೆಸಲು ನಿರ್ಬಂಧ ಹೇರಿದ್ದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅಗೌರವವನ್ನು ತೋರಿಸಿ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳು ಚುನಾವಣಾ ಕಚೇರಿ ಆವರಣದಲ್ಲಿ ಯಾವುದೇ ಅನುಮತಿ ಇಲ್ಲದೆ ಧರಣಿ/ಪ್ರತಿಭಟನೆಯನ್ನು ನಡೆಸಿರುವುದು ನ್ಯಾಯಾಲಯ ಆದೇಶದ ಉಲ್ಲಂಘನೆ ಆಗಿರುತ್ತದೆ. ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಲ್ಲ, ಅದು ಸಂವಿಧಾನಾತ್ಮಕವಾಗಿ ಸ್ವತಂತ್ರವಾದ ಚುನಾವಣಾ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಇಂತಹ ಸಂಸ್ಥೆಯ ಕಚೇರಿ ಆವರಣವನ್ನೇ ರಾಜಕೀಯ ಪ್ರತಿಭಟನೆಗೆ ಬಳಸಿಕೊಳ್ಳಲು ಅವಕಾಶ ನೀಡಿರುವುದು ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆ ಹಾಗೂ ಸಾರ್ವಜನಿಕರ ವಿಶ್ವಾಸದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಈ ಹಿನ್ನೆಲೆಯಲ್ಲಿ ಕೆಳಗಿನ ಪ್ರಶ್ನೆಗಳಿಗೆ ಪೊಲೀಸ್ ಆಯುಕ್ತರು ಸ್ಪಷ್ಟ ಉತ್ತರ ನೀಡಬೇಕು:
ಇದೊಂದು ಉಚ್ಛ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿದ್ದು, ನ್ಯಾಯಾಲಯ ನಿಂದನೆ ಪ್ರಕರಣ ಆಗಿರುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು, ಸಚಿವರುಗಳ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಬೇಕಾಗಿ ಕೋರಲಾಗಿದೆ.
ಮುಖ್ಯಮಂತ್ರಿ ಹಾಗೂ ಸಚಿವರು ಚುನಾವಣಾ ಆಯೋಗದ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದು ಯಾರು? ಈ ಪ್ರತಿಭಟನೆಗೆ ಲಿಖಿತವಾಗಿ ಅನುಮತಿ ನೀಡಲಾಗಿತ್ತೇ? ನೀಡಿದ್ದರೆ, ಅದರ ಪ್ರತಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಾಮಾನ್ಯ ನಾಗರಿಕರು ಅಥವಾ ಪ್ರತಿಪಕ್ಷಗಳು ಇದೇ ರೀತಿ ಚುನಾವಣಾ ಕಚೇರಿ ಆವರಣದಲ್ಲಿ ಧರಣಿ ನಡೆಸಲು ಬಂದರೆ ಅವರಿಗೆ ಇದೇ ರೀತಿಯ ಅವಕಾಶ ಪೊಲೀಸ್ ಇಲಾಖೆ ನೀಡಲಾಗುತ್ತದೆಯೇ? ಮುಖ್ಯಮಂತ್ರಿ ಹಾಗೂ ಸಚಿವರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕೈಗೊಂಡ ಕ್ರಮಗಳ ಸಂಪೂರ್ಣ ವರದಿಯನ್ನು ಬಹಿರಂಗಪಡಿಸಬೇಕು ಎಂದು ಹೇಳಲಾಗಿದೆ.
ನಡೆದ ಘಟನೆಯ ಕುರಿತು ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ, ಪೊಲೀಸ್ ಬಂದೋಬಸ್ತ್ ವಿವರ, ಅನುಮತಿ ಪತ್ರ ಹಾಗೂ ಸಂಬಂಧಿತ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಕ್ರಮದ ವಿವರವನ್ನು ಲಿಖಿತವಾಗಿ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.

