ಭಾರತೀಯರಿಗೆ ಒಂದು ದೇಶ ವಿಶೇಷ ಆತಿಥ್ಯ ನೀಡುತ್ತಿದೆ. ನಮ್ಮ ನೆರೆಯ ದೇಶದಲ್ಲಿರುವ ಭಾರತೀಯರಿಗೆ ರಾಜಮರ್ಯಾದೆ ಸಿಗುತ್ತಿದೆ ಎನ್ನಲಾಗಿದೆ. ಓರ್ವ ಕನ್ನಡ ಯೂಟ್ಯೂಬರ್‌ಗೆ ಇಂತಹ ಅನುಭವ ಎದುರಾಗಿದೆ. ಭಾರತೀಯರಿಗೆ ವಿಶೇಷ ಆತಿಥ್ಯ ನೀಡುವ ಆ ದೇಶದ ಪ್ರದೇಶ ಯಾವುದು ಎಂಬುದನ್ನು ತಿಳಿದುಕೊಳ್ಳಿ.
ಭಾರತವು ಸಾಧ್ಯವಾದಾಗಲೆಲ್ಲ ಹಲವು ದೇಶಗಳಿಗೆ ಆರ್ಥಿಕ ನೆರವು ನೀಡಿದೆ. ಯುದ್ಧಗಳಿಂದ ಸಂಕಷ್ಟಕ್ಕೆ ಸಿಲುಕಿದ ದೇಶಗಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಿದೆ. ಹೀಗಾಗಿ ಕೆಲವು ದೇಶಗಳ ಜನರಿಗೆ ಭಾರತೀಯರ ಬಗ್ಗೆ ವಿಶೇಷ ಅಭಿಮಾನವಿದೆ. ಅಂತಹ ದೇಶಗಳಲ್ಲಿ ಅಫ್ಘಾನಿಸ್ತಾನವೂ ಸೇರಿದೆ ಎಂದು ವರದಿ ತಿಳಿಸಿದೆ.
ಯುದ್ಧಗಳು ಮತ್ತು ತಾಲಿಬಾನ್ ಆಡಳಿತದಿಂದ ಅಫ್ಘಾನಿಸ್ತಾನ ಹಲವು ಸಂಕಷ್ಟಗಳನ್ನು ಎದುರಿಸಿದೆ. ಆದರೆ ಅಲ್ಲಿನ ಜನರಲ್ಲಿ ಭಾರತೀಯರ ಬಗ್ಗೆ ಅಪಾರ ಪ್ರೀತಿ ಇದೆ ಎಂದು ಓರ್ವ ಕನ್ನಡ ಯೂಟ್ಯೂಬರ್ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಗಡಿ ನಗರ ಜಲಾಲಾಬಾದ್‌ನ ಬೀದಿಗಳಲ್ಲಿ ಅವರು ಫುಡ್ ಟೂರ್ ನಡೆಸಿದ್ದು, ₹10ರ ಬಿರಿಯಾನಿಯಿಂದ ಸುಮಾರು ಒಂದೂವರೆ ಕೆಜಿ ತೂಕದ ‘ಪಿಜ್ಜಾ ಚಪ್ಲಿ ಕಬಾಬ್’ವರೆಗೆ ಹಲವು ವಿಶೇಷತೆಗಳನ್ನು ವಿವರಿಸಿದ್ದಾರೆ.
ಪಾಕಿಸ್ತಾನ–ಅಫ್ಘಾನಿಸ್ತಾನ ಗಡಿಯಲ್ಲಿರುವ ಪ್ರಮುಖ ನಗರ ಜಲಾಲಾಬಾದ್. ಇಲ್ಲಿನ ಜನರ ಜೀವನಶೈಲಿ ವಿಭಿನ್ನವಾಗಿದೆ. ಮುಂಜಾನೆಯ ಉಪಾಹಾರದಿಂದ ಹಿಡಿದು ಅಲ್ಲಿನ ವಾತಾವರಣದವರೆಗೆ ಹಲವು ಸಂಗತಿಗಳು ಇತರ ಪ್ರದೇಶಗಳಿಗಿಂತ ಭಿನ್ನವಾಗಿ ಕಾಣುತ್ತವೆ.
ಇಲ್ಲಿ ಬೆಳಗಿನ ಉಪಾಹಾರವು ಬಿಸಿಬಿಸಿ, ಗಟ್ಟಿ ಕೆನೆಯಿರುವ ತಾಜಾ ಹಸುವಿನ ಹಾಲಿನಿಂದ ಆರಂಭವಾಗುತ್ತದೆ. ಇಲ್ಲಿನವರು ಹಾಲನ್ನು ಗ್ಲಾಸ್‌ಗಳಲ್ಲಿ ಮಾತ್ರವಲ್ಲದೆ ಲೀಟರ್‌ಗಳ ಲೆಕ್ಕದಲ್ಲಿಯೂ ಕುಡಿಯುತ್ತಾರೆ. ಇದರ ಜೊತೆಗೆ ಬೆಂಡೆಕಾಯಿ ಪಲ್ಯ, ಬೇಳೆ, ಛೋಲೆ ಮತ್ತು ನಾನ್ (ಅಫ್ಘಾನಿ ರೊಟ್ಟಿ) ಸೇವಿಸುತ್ತಾರೆ.
ಅಫ್ಘಾನಿಸ್ತಾನದಲ್ಲಿ ಪನ್ನೀರ್ ಅನ್ನು ಒಂದು ರೀತಿಯಲ್ಲಿ ಮಾಂಸಾಹಾರವೆಂದೇ ಪರಿಗಣಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಲನ್ನು ಒಡೆದು ಪನ್ನೀರ್ ತಯಾರಿಸುವಾಗ ಅದನ್ನು ಸೋಸಿ ಗಟ್ಟಿಗೊಳಿಸಲು ಬಟ್ಟೆಯ ಬದಲು ಕುರಿ ಅಥವಾ ಹಸುವಿನ ಕರುಳನ್ನು ಬಳಸುತ್ತಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅದನ್ನು ನಾನ್‌ವೆಜ್ ಎಂದು ಪರಿಗಣಿಸಲಾಗುತ್ತದೆ.
ಈ ನಗರದಲ್ಲಿ ರಸ್ತೆ ಬದಿಯಲ್ಲಿ ಜನರು ಕುಳಿತು ಮುಂಜಾನೆಯೇ ಬಿರಿಯಾನಿ ತಿನ್ನುವುದು ಸಾಮಾನ್ಯ. ಬಡವರು ₹10 ಅಥವಾ ₹20 ನೀಡಿದರೂ ವ್ಯಾಪಾರಿಗಳು ಪ್ರೀತಿಯಿಂದ ಬಿರಿಯಾನಿ ಬಡಿಸುತ್ತಾರೆ ಎನ್ನಲಾಗಿದೆ.
ಭಾರತೀಯರನ್ನು ಕಂಡರೆ ಇಲ್ಲಿನ ಜನರಿಗೆ ವಿಶೇಷ ಪ್ರೀತಿ ಇದೆ ಎಂದು ಕನ್ನಡ ಯೂಟ್ಯೂಬರ್ ತಿಳಿಸಿದ್ದಾರೆ. ಭಾರತೀಯರನ್ನು ‘ಮೆಹಮಾನ್’ ಅಂದರೆ ಅತಿಥಿ ಎಂದು ಕರೆಯುವ ಕೆಲ ವ್ಯಾಪಾರಿಗಳು ಊಟಕ್ಕೆ ಹಣವನ್ನೇ ಪಡೆಯುವುದಿಲ್ಲ. ಉಚಿತವಾಗಿ ಆಹಾರ ನೀಡುತ್ತಾರೆ ಎನ್ನಲಾಗಿದೆ.
ಇನ್ನು ಈ ನಗರದಲ್ಲಿ ಬೃಹತ್ ಗಾತ್ರದ ‘ಚಪ್ಲಿ ಕಬಾಬ್’ ಕೂಡ ವಿಶೇಷವಾಗಿದೆ. ಸ್ವಿಮ್ಮಿಂಗ್ ಪೂಲ್‌ನಷ್ಟು ದೊಡ್ಡದಾದ ತವೆಯ ಮೇಲೆ ಮಟನ್ ಕೀಮಾ, ಮೊಟ್ಟೆ, ಟೊಮೆಟೊ, ಈರುಳ್ಳಿ, ಮಸಾಲೆ ಪದಾರ್ಥಗಳು ಮತ್ತು ಚೀಸ್ ಸೇರಿಸಿ ಸುಮಾರು ಒಂದೂವರೆ ಕೆಜಿ ತೂಕದ ಮೆಗಾ ಕಬಾಬ್ ತಯಾರಿಸಲಾಗುತ್ತದೆ. ಇದನ್ನು ‘ಪಿಜ್ಜಾ ಕಬಾಬ್’ ಎಂದು ಕರೆಯಲಾಗುತ್ತದೆ.
ಅದೇ ರೀತಿ 500 ಮೊಟ್ಟೆಗಳನ್ನು ಬಳಸಿ ತಯಾರಿಸುವ ಬೃಹತ್ ಆಮ್ಲೆಟ್ ಕೂಡ ಇಲ್ಲಿನ ವಿಶೇಷ ಆಹಾರವಾಗಿದೆ. ಇಲ್ಲಿ ಸಂಚರಿಸುವ ಟ್ಯಾಕ್ಸಿಗಳು ಕಡ್ಡಾಯವಾಗಿ ‘ನೀಲಿ ಮತ್ತು ಬಿಳಿ’ ಬಣ್ಣದಲ್ಲೇ ಇರಬೇಕು ಎಂದು ತಾಲಿಬಾನ್ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ ಎಂದು ವರದಿಯಾಗಿದೆ.

