ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಗಳು ನೀಡಿದ ಹೇಳಿಕೆಯಿಂದ ಕೆರಳಿದ ತಾಯಿಯೊಬ್ಬಳು, ಕೋರ್ಟ್ ಆವರಣದ ಹೊರಗಡೆಯೇ ಮಗಳ ಪ್ರೇಮಿಯ ತಂದೆಗೆ ಚಪ್ಪಲಿ ಹಾಗೂ ಕಾಲಿನಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಕೃತ್ಯದ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಘಟನೆಯ ವಿವರ
ಹಮೀರ್ಪುರ ಜಿಲ್ಲೆಯ ಬಿವಾಂರ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಯುವತಿಯೊಬ್ಬಳು ಸೆಪ್ಟೆಂಬರ್ 20 ರಂದು ಕಾನ್ಪುರದ ಬಿಥೂರ್ ಮೂಲದ ತನ್ನ ಪ್ರೇಮಿಯೊಂದಿಗೆ ಮನೆಯಿಂದ ತೆರಳಿದ್ದಳು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬುಧವಾರ ಯುವತಿಯನ್ನು ಪತ್ತೆ ಹಚ್ಚಿದ್ದರು. ಬಳಿಕ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ ಯುವತಿಯು, ತಾನು ತನ್ನ ಪ್ರೇಮಿಯೊಂದಿಗೆ ವಾಸಿಸಲು ಬಯಸುವುದಾಗಿ ಸ್ಪಷ್ಟಪಡಿಸಿದಳು. ಮಗಳ ಈ ನಿರ್ಧಾರವನ್ನು ಕೇಳಿ ಕೋರ್ಟ್ ಆವರಣದ ಹೊರಗೆ ಕಾಯುತ್ತಿದ್ದ ಆಕೆಯ ತಾಯಿ ತೀವ್ರ ಆಕ್ರೋಶಗೊಂಡಳು.
ಕೋರ್ಟ್ ಆವರಣದಲ್ಲೇ ಧರ್ಮದೇಟು
ಮಗಳು ಪ್ರೇಮಿಯ ಪರ ಹೇಳಿಕೆ ನೀಡಿದ್ದರಿಂದ ಕೋಪೋದ್ರಿಕ್ತಳಾದ ತಾಯಿ, ಕೋರ್ಟ್ ಆವರಣದ ಹೊರಗೆ ನಿಂತಿದ್ದ ಯುವಕನ ತಂದೆಯ ಬಳಿ ತೆರಳಿ ಏಕಾಏಕಿ ಜಗಳ ತೆಗೆದು ಆತನಿಗೆ ಕಪಾಳಮೋಕ್ಷ ಮಾಡಿ, ಕಾಲಿನಿಂದ ಒದ್ದು, ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ಸಂಪೂರ್ಣ ದೃಶ್ಯಾವಳಿಗಳು ವೀಡಿಯೋದಲ್ಲಿ ಸೆರೆಯಾಗಿದ್ದು, ಹಲ್ಲೆ ನಡೆಸಿದ ನಂತರ ಮಹಿಳೆ ಬೊಲೆರೋ ವಾಹನವನ್ನೇರಿ ಸ್ಥಳದಿಂದ ತೆರಳಿದ್ದಾಳೆ.
ಪೋಲಿಸರ ಪ್ರತಿಕ್ರಿಯೆ
ಈ ಘಟನೆಗೆ ಸಂಬಂಧಿಸಿದಂತೆ ಹಮೀರ್ಪುರ ಸರ್ಕಲ್ ಆಫೀಸರ್ (ಸದರ್) ಯಶ್ಪಾಲ್ ಸಿಂಗ್ ಪ್ರತಿಕ್ರಿಯಿಸಿದ್ದು, “ಈ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ಈವರೆಗೆ ಯಾವುದೇ ಲಿಖಿತ ದೂರುಗಳು ಬಂದಿಲ್ಲ. ಸಂತ್ರಸ್ತರು ದೂರು ನೀಡಿದರೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

