
ಬೆಂಗಳೂರು: ಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಮರುದಿನ ಹಿಂದೂ ಉದ್ಯೋಗಿಗಳಿಗೆ ರಜೆ ನೀಡಿವಂತೆ ರಾಜ್ಯ ಸರ್ಕಾರಕ್ಕೆ ಹಿಂದೂ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ರಂಜಾನ್ ಗಾಗಿ ಇಸ್ಲಾಂ ಸಮುದಾಯದ ಉದ್ಯೋಗಿಗಳಿಗೆ ಪ್ರತಿದಿನ ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ಮನೆಗೆ ತೆರಳಲು ಅನುಮತಿ ನೀಡುವಂತೆ ಕೋರಿ ಮುಸ್ಲಿಂ ಮುಖಂಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಬೆನ್ನಲ್ಲೇ ಹಿಂದೂ ಮುಖಂಡರು, ಶಿವರಾತ್ರಿ ಮರು ದಿನ ಹಿಂದೂಗಳಿಗೂ ರಜೆ ನೀಡಿ ಎಂದು ಮನವಿ ಮಾಡಿದ್ದಾರೆ.
ಶಿವರಾತ್ರಿಯಂದು ಜನರು ಜಾಗರಣೆ, ಜಪ-ತಪ, ಭಜನೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದಾಗಿ ಮರುದಿನ ಕಚೇರಿಗಳಿಗೆ ತೆರಳಿ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಮಸ್ಯೆಯಾಗುತ್ತದೆ. ಅಲ್ಲದೇ ಶಿವರಾತ್ರಿ ಮರುದಿನವೂ ಪೂಜಾ ಕೈಂಕರ್ಯಗಳು ಇರುವುದರಿಂದ ಶಿವರಾತ್ರಿ ಮರುದಿನ ಹಿಂದೂ ಉದ್ಯೋಗಿಗಳಿಗೆ ರಜೆ ನೀಡಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.
ನಾಳೆ ಶಿವರಾತ್ರಿ ಹಿನ್ನೆಲೆಯಲ್ಲಿ ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು. ಪ್ರತಿ ವರ್ಷ ರಜೆ ಕೊಡುವಂತೆ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿವೆ.
ರಂಜಾನ್ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಬೇಗನೆ ಮನೆಗೆ ತೆರಳಲು ತೆಲಂಗಾಣ, ಆಂಧ್ರಪ್ರದೇಶ ಸರ್ಕಾರ ಅವಕಾಶ ನೀಡಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ವಿನಾಯಿತಿ ನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎ ಆರ್ ಎಂ ಹುಸೇನ್, ಸೈಅದ್ ಅಹ್ಮದ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಹಿಂದೂ ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಹಿಂದೂ ಧಾರ್ಮಿಕ ಹಬ್ಬ, ಆಚರಣೆಯ ಸಂದರ್ಭಗಳಲ್ಲಿಯೂ ಹೆಚ್ಚುವರಿ ರಜೆ ನೀಡುವಂತೆ ಹಿಂದೂ ಮುಖಂಡರು ಮನವಿ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.