ನವದೆಹಲಿ: ವಾರಕ್ಕೆ 60 ರಿಂದ 90 ಗಂಟೆ ಕೆಲಸ ಮಾಡುವ ಅಗತ್ಯತೆ ಕುರಿತಾಗಿ ಚರ್ಚೆ ನಡೆದಿರುವ ಹೊತ್ತಲ್ಲೇ ವಾರಕ್ಕೆ 60 ಗಂಟೆ ದುಡಿಮೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
12 ತಾಸು ಕೆಲಸದಿಂದ ಮಾನಸಿಕ ಸ್ವಾಸ್ಥ್ಯಕ್ಕೆ ಅಪಾಯವಾಗುತ್ತದೆ ಎಂದು ಹೇಳಲಾಗಿದ್ದು, 60, 90 ಗಂಟೆ ದುಡಿಮೆಗೆ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ, ಎಲ್ ಅಂಡ್ ಟಿ ಅಧ್ಯಕ್ಷ ಸುಬ್ರಹ್ಮಣ್ಯಂ ಅವರು ವಾರಕ್ಕೆ 60 ರಿಂದ 90 ಗಂಟೆ ಕೆಲಸ ಮಾಡುವ ಕುರಿತು ನೀಡಿದ ಹೇಳಿಕೆ ಬಗ್ಗೆ ದೇಶವ್ಯಾಪಿ ಚರ್ಚೆ ನಡೆದಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಆರ್ಥಿಕ ಸಮೀಕ್ಷೆ ನೀಡಿರುವ ವರದಿ ಗಮನ ಸೆಳೆದಿದೆ. ವಾರಕ್ಕೆ 60 ಗಂಟೆಗಿಂತ ಹೆಚ್ಚಿನ ದುಡಿಮೆಯು ಸಿಬ್ಬಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಹೇಳಿದೆ.
ಉತ್ಪಾದಕತೆಯ ಹೆಸರಲ್ಲಿ ಕಚೇರಿಗಳಲ್ಲಿ ಸುದೀರ್ಘ ಅವಧಿಗೆ ಕೆಲಸ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ನಿತ್ಯವೂ ಕುಳಿತಲ್ಲಿಯೇ 12 ಗಂಟೆಗಿಂತ ಹೆಚ್ಚು ಕೆಲಸ ಮಾಡುವುದು ಮಾನಸಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿ ಎಂದು ಹಲವು ಅಧ್ಯಯನ ವರದಿಗಳು ಹೇಳಿದೆ ಎಂದು ಸರ್ಕಾರ ಆರ್ಥಿಕ ಸಮೀಕ್ಷೆ ವರದಿಯಲ್ಲಿ ತಿಳಿಸಿದೆ.