ಬೆಂಗಳೂರು : ವಿಧಾನಸೌಧ ಆವರಣದಲ್ಲಿ ನಿನ್ನೆ ( ಸೆ.12) ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ನೂತನ ಬಿಎಂಟಿಸಿ ಬಸ್ಗಳನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಇಂದು ಬೆಂಗಳೂರು ನಗರದ ಜನತೆಯ ಅನುಕೂಲಕ್ಕಾಗಿ ಮೊದಲ ಹಂತದಲ್ಲಿ 100 ನೂತನ ಬಿಎಂಟಿಸಿ ಬಸ್ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಒಟ್ಟು 840 ನೂತನ ಬಸ್ಗಳು ಬಿಎಂಟಿಸಿ ಗೆ ಸೇರಲಿವೆ.
ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನ ಬಸ್ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸುವ ಜೊತೆಗೆ ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಿದ್ದಲ್ಲದೆ, ನೂತನವಾಗಿ ಇನ್ನಷ್ಟು ಕ್ಯಾಂಟೀನ್ಗಳನ್ನು ಆರಂಭಿಸುತ್ತಿದ್ದೇವೆ.
ಇದೇ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ.
ಈ ವೇಳೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾದ ಅಜಯ್ ಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ಅವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಶೇಷತೆಗಳು:
• ಎಲ್ಲವೂ ಪರಿಸರ ಸ್ನೇಹಿ ಬಸ್ಗಳು
• 12 ಮೀಟರ್ ಉದ್ದ, 41 ಆಸನ ಸಾಮರ್ಥ್ಯ
• ಹೆಚ್ಚು ಜನ ನಿಲ್ಲಲು ಅವಕಾಶ
• 3 ಕ್ಯಾಮರಾ, ಎಲ್ಇಡಿ ಬೋರ್ಡ್
• ಮಹಿಳೆಯರ ಸುರಕ್ಷತೆಗೆ ತುರ್ತು ಪ್ಯಾನಿಕ್ ಬಟನ್
• ಅಗ್ನಿ ಅವಘಡ ತಪ್ಪಿಸಲು ಎಚ್ಚರಿಕೆ ವ್ಯವಸ್ಥೆ
• ಹೆಡ್ ಆಫೀಸ್ನಲ್ಲೇ ಕುಳಿತು ಬಸ್ ಎಲ್ಲಿದೆ ಎ೦ದು ತಿಳಿದುಕೊಳ್ಳಲು ಟ್ರ್ಯಾಕಿಂಗ್ ವ್ಯವಸ್ಥೆ