alex Certify BIG NEWS : ಕೃಷಿ ಭೂಮಿ ಮತ್ತು ಕಟ್ಟಡ ವಿವಾದ : ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಮಾರ್ಗಸೂಚಿ ಪ್ರಕಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕೃಷಿ ಭೂಮಿ ಮತ್ತು ಕಟ್ಟಡ ವಿವಾದ : ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಮಾರ್ಗಸೂಚಿ ಪ್ರಕಟ..!

ಬೆಂಗಳೂರು : ಭೂಮಿ ಮತ್ತು ಕಟ್ಟಡ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.

ಭೂಮಿಗೆ (ಕೃಷಿಭೂಮಿ, ಕೃಷಿಯೇತರ ಭೂಮಿ, ಕಟ್ಟಡಗಳು ಮತ್ತು ನಿವೇಶನ) ಸಂಬಂಧಪಟ್ಟಂತೆ ಬಹು ಸಂಖ್ಯೆಯಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದೂರುಗಳನ್ನು ನೀಡುತ್ತಿರುವುದು ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಮಾಧ್ಯಮಗಳು, ಸಾರ್ವಜನಿಕರು ಮತ್ತು ವಿಧಾನ ಮಂಡಲದಲ್ಲಿ ಚುನಾಯಿತ ಪ್ರತಿನಿಧಿಗಳು, ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳು ಪೊಲೀಸ್ ಭೂವಿವಾದವನ್ನು ತೀರ್ಮಾನ ಮಾಡುವ ಮತ್ತು ಈ ಭೂಮಿ ವಿವಾದಕ್ಕೆ ಸಂಬಂಧಪಟ್ಟಂತೆ ದೊಡ್ಡ ಪ್ರಮಾಣ ಅಕ್ರಮ ಸಂಭಾವನೆ ಪಡೆಯುತ್ತಿದ್ದಾರೆಂದು ಆಪಾದನೆಯನ್ನು ಮಾಡುವುದು ಸಾಮಾನ್ಯವಾಗಿದೆ. ಇದು ಪೊಲೀಸ್ ಇಲಾಖೆಯ ವರ್ಚಸ್ಸಿನ ಮೇಲೆ ಮಸಿ ಬಳಿದಂತಾಗುತ್ತಿದೆ. ಆದುದರಿಂದ ಕೃಷಿಭೂಮಿ, ಕೃಷಿಯೇತರ ಭೂಮಿ, ಕಟ್ಟಡಗಳು ಮತ್ತು ನಿವೇಶನಗಳ ಸಂಬಂಧವಾಗಿ ಸ್ವೀಕೃತವಾಗುವ ದೂರುಗಳನ್ನು ಕಟ್ಟುನಿಟ್ಟಾಗಿ ಮತ್ತು ನ್ಯಾಯ ಸಮ್ಮತವಾಗಿ ಇತ್ಯರ್ಥಗೊಳಿಸುವ ಕುರಿತಂತೆ ದೂರುಗಳನ್ನು ಸ್ವೀಕರಿಸಿ ವಿಚಾರಣೆ ಕೈಗೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ಹಾಗೂ ಮಾರ್ಗಸೂಚಿಗಳನ್ನು ನೀಡುವುದು ಅತ್ಯಾವಶ್ಯಕ ಎಂದು ಕಂಡು ಬಂದಿರುತ್ತದೆ. ಆದುದರಿಂದ ಕೆಳಕಂಡ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿಗಾಗಿ ಮತ್ತು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ನೀಡಲಾಗಿದೆ.

1. ಕೃಷಿ ಭೂಮಿ ಮಾಲೀಕತ್ವ ಮತ್ತು ಸ್ವಾಧೀನತೆ :
1.1 ಕೃಷಿ ಭೂಮಿ ಮಾಲೀಕತ್ವ ಮತ್ತು ಸ್ವಾಧೀನತೆಯ ಹಕ್ಕುಗಳನ್ನು ಆಯಾ ಜಮೀನಿಗೆ ಸಂಬಂಧಪಟ್ಟ ಹಕ್ಕು ಪತ್ರಗಳಲ್ಲಿ (ರೆಕಾರ್ಡ್ ಆಫ್ ರೈಟ್ಸ್) ನಿಖರವಾಗಿ ನಮೂದಿಸಲಾಗಿರುತ್ತದೆ. ಈ ಹಕ್ಕು ಪತ್ರಗಳು ಕರ್ನಾಟಕ ಭೂ ಕಂದಾಯ ಅಧಿನಿಯಮಗಳು-1966, ನಿಯಮ 61ರ ಪ್ರಕಾರ ಪ್ರಚೂರ ಪಡಿಸಲಾಗುತ್ತದೆ. ಈ ರೀತಿ ಪ್ರತಿಯೊಂದು ಜಮೀನಿಗೆ ಸಂಬಂಧಪಟ್ಟ ಹಕ್ಕು ದಾಖಲೆಗಳನ್ನು ಕರ್ನಾಟಕ ಭೂ ಕಂದಾಯ ಅಧಿನಿಯಮಗಳು 1966 ನಿಯಮ 62ರ ಪ್ರಕಾರ ಸಂಬಂಧಪಟ್ಟ ತಹಶೀಲ್ದಾರರು ನಮೂನೆ 16ರಲ್ಲಿ ನಿರ್ವಹಿಸುತ್ತಾರೆ. ಹಕ್ಕು ಪತ್ರದಲ್ಲಿ ಭೂಮಿಯ ಮಾಲೀಕತ್ವವನ್ನು ಅಂಕಣ 10ರಲ್ಲಿ ಹಾಗೂ ಭೂಮಿಯ ಸ್ವಾಧೀನತೆಯನ್ನು ಅಂಕಣ 12ರಲ್ಲಿ ನಮೂದಿಸಿರುತ್ತಾರೆ. ಕರ್ನಾಟಕ ಭೂ ಕಂಚಾಯ ನಿಯಮ 133ರಲ್ಲಿ ಈ ಕೆಳಕಂಡಂತಿರುತ್ತದೆ.

ಭೂ ದಾಖಲೆ ಪತ್ರಗಳಲ್ಲಿ ಮತ್ತು ಖಾತಾ ಬದಲಾವಣೆ ರಿಜಿಸ್ಟರ್ ಅಥವಾ ಒಂದು ಪಟ್ಟ ಪುಸ್ತಕದಲ್ಲಿ ನಮೂದಾಗಿರುವ ವಿಷಯಗಳು ಸುಳ್ಳು ಎಂದು ಕಡಾ ಖಂಡಿತವಾಗಿ ಸಿದ್ದವಾಗುವವರೆಗೆ ಭೂ ದಾಖಲೆಯಲ್ಲಿ ನಮೂದಾಗಿರುವ ವಿವರಗಳನ್ನು ಸತ್ಯವೆಂದು ಭಾವಿಸಬೇಕಾಗುತ್ತದೆ”.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ 1966 ರ ಅಡಿಯಲ್ಲಿ ನಮೂದಿಸಿರುವ ಕಲಂಗಳ ಪ್ರಕಾರ ಕೃಷಿ ಭೂಮಿಗೆ ಸಂಬಂಧಪಟ್ಟ ಮಾಲೀಕತ್ವ ಮತ್ತು ಸ್ವಾಧೀನತೆಯನ್ನು ಈ ಭೂಮಿಗೆ ಸಂಬಂಧಪಟ್ಟ ಭೂದಾಖಲೆ ಹಕ್ಕುಪತ್ರಗಳ (ರೆಕಾರ್ಡ್ ಆಫ್ ರೈಟ್ಸ್) ಪ್ರಕಾರವೇ ತೀರ್ಮಾನ ಮಾಡುವುದು ಉಚಿತವಾಗಿರುತ್ತದೆ. ಆದುದರಿಂದ ಎಲ್ಲಾ ಪೊಲೀಸ್ ಅಧಿಕಾರಿಗಳು ಕೃಷಿ ಅಥವಾ ಭೂಮಿಗೆ ಸಂಬಂಧಿಸಿದಂತೆ ಯಾವ ವ್ಯಕ್ತಿಯ ಹೆಸರು ನಮೂನೆ 16ರಲ್ಲಿ ಇರುವ ಭೂ ದಾಖಲೆ ಹಕ್ಕುಪತ್ರದಲ್ಲಿ ಅಂಕಣ 10 ಮತ್ತು 12ರಲ್ಲಿ ಯಾರ ಹೆಸರು ಇರುತ್ತದೆಯೋ ಅವರಿಗೆ ಮಾತ್ರಾ ಆ ಕೃಷಿ ಜಮೀನಿಗೆ ಸಂಬಂಧಪಟ್ಟಂತೆ ರಕ್ಷಣೆ ನೀಡತಕ್ಕದ್ದು.

1.3 ಭೂ ಸುಧಾರಣೆ ಅಧಿನಿಯಮ 1974 ಜಾರಿಗೆ ಬಂದ ನಂತರ ಕರ್ನಾಟಕ ರಾಜ್ಯದಲ್ಲಿ ಯಾವುದೇ ರೀತಿಯ ಹಿಡುವಳಿ, ಗೇಣಿ ಮತ್ತು ಬೆಳೆಯನ್ನು ಹಂಚಿಕೊಳ್ಳುವ ವ್ಯವಸ್ಥೆ ಅಥವಾ ಮಾನ್ಯತೆ ಇರುವುದಿಲ್ಲ, ಆದ್ದರಿಂದ ಯಾವುದೇ ಗೇಣಿ ವ್ಯವಸ್ಥೆ ಅಥವಾ ಬೆಳೆ ಹಂಚಿಕೊಳ್ಳುವ ವ್ಯವಸ್ಥೆ ಅಥವಾ ಇತರೆ ಯಾವುದೇ ರೀತಿಯ ಸ್ವಾಧೀನತೆಯನ್ನು ಆ ಭೂಮಿಯ ಮಾಲೀಕನಲ್ಲದೆ ಬೇರೆ ಯಾರೂ ಹೊಂದಲು ಅವಕಾಶ ವಿರುವುದಿಲ್ಲ. ಆದುದರಿಂದ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಅಧಿಕಾರಿಗಳು ಕೃಷಿ ಭೂಮಿಗೆ ಸಂಬಂಧಪಟ್ಟಂತೆ ವಿವಾದಗಳು ಬಂದಾಗ ಭೂ ದಾಖಲೆ ಹಕ್ಕುಪತ್ರಗಳ ಪ್ರಕಾರ ಅಂಕಣ 10 ಮತ್ತು 12ರಲ್ಲಿ ಹೆಸರು ನಮೂದಾಗಿರುವ ವ್ಯಕ್ತಿಗೆ, ಆ ಭೂಮಿಯನ್ನು ಶಾಂತರೀತಿಯಲ್ಲಿ ಅನುಭವಿಸಿಕೊಂಡು ಹೋಗಲು ರಕ್ಷಣೆ ನೀಡತಕ್ಕದ್ದು.

ಪೊಲೀಸ್ ಅಧಿಕಾರಿಗಳು ಕೃಷಿ ಭೂಮಿಗೆ ಸಂಬಂಧಪಟ್ಟಂತೆ ಯಾವುದೇ ಒಟ್ಟು ಮುಕ್ತಿಯಾರು ಪತ್ರ (ಜನರಲ್ ಪವರ್ ಆಫ್ ಅಟಾರ್ನಿ GPA) ಮಾರಾಟದ ಒಪ್ಪಂದ ಪತ್ರ (ಸೇಲ್ ಡೀಡ್) ಅಥವಾ ಯಾವುದೇ ಭೂಮಿಯನ್ನು ಖರೀದಿಸಲು ಮುಂಗಡವಾಗಿ ಹಣ ನೀಡಿದ ದಾಖಲೆ ಪತ್ರಗಳನ್ನು ಹಾಜರು ಪಡಿಸಿದಲ್ಲಿ ಅಂತಹ ಅರ್ಜಿಗಳನ್ನು ಪುರಸ್ಕರಿಸಬಾರದು. ಯಾವುದೇ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯು ಇಂತಹ ದಾಖಲಾತಿಗಳನ್ನು ಹಾಜರುಪಡಿಸಿದರೆ ಅವರಿಗೆ ಸೂಕ್ತ ಸಲಹೆ ನೀಡಿ ಮತ್ತು ಅವರು ಕಂದಾಯ ಅಧಿಕಾರಿಗಳನ್ನು ಭೇಟಿಮಾಡಿ ಆ ಸಂಬಂಧಪಟ್ಟ ಭೂಮಿಯ ಖಾತೆಯನ್ನು ಬದಲಾವಣೆ ಮಾಡಿಕೊಂಡು ಬರಬೇಕೆಂದು ಹಿಂಬರಹ ನೀಡುವುದು. ಕಂದಾಯ ಇಲಾಖೆಯ ಸಕ್ಷಮ ಅಧಿಕಾರಿಗಳು ಖಾತೆಯನ್ನು ಬದಲಾವಣೆ ಮಾಡಿ ಅದರ ಪ್ರಮಾಣಿಕೃತ ಪ್ರತಿಯನ್ನು ನೀಡಿದಾಗ ಮಾತ್ರ ಅವರಿಗೆ ಆ ಜಮೀನಿಗೆ ಸಂಬಂಧಪಟ್ಟಂತೆ ರಕ್ಷಣೆಯನ್ನು ನೀಡಲು ಕ್ರಮ ಕೈಗೊಳ್ಳತಕ್ಕದ್ದು. ಕೃಷಿ ಭೂಮಿಗೆ ಸಂಬಂಧಪಟ್ಟಂತೆ ಮಾಲೀಕತ್ವ ಮತ್ತು ಸ್ವಾಧೀನತೆಯ ವಿವಾದಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹೊರತು ಪಡಿಸಿ ಬೇರೆ ಇಲಾಖೆಯ ಅಧಿಕಾರಿಗಳಿಗೆ ವಿಚಾರಣೆ ಮಾಡುವ ಅಥವಾ ಇತ್ಯರ್ಥಗೊಳಿಸುವ ಹಕ್ಕು/ಅಧಿಕಾರ ಇರುವುದಿಲ್ಲ.

ಯಾವುದೇ ಪೊಲೀಸ್ ಅಧಿಕಾರಿಯು ಒಟ್ಟು ಮುಕ್ತಿಯಾರು ಪತ್ರ (ಜನರಲ್ ಪವರ್ ಆಫ್ ಅಟಾರ್ನಿ GPA) ಮಾರಾಟದ ಒಪ್ಪಂದ ಪತ್ರ (ಸೇಲ್ ಡೀಡ್) ಅಥವಾ ಯಾವುದೇ ಭೂಮಿಯನ್ನು ಖರೀದಿಸಲು ಮುಂಗಡವಾಗಿ ಹಣ ನೀಡಿದ ದಾಖಲೆ ಪತ್ರಗಳ ಆಧಾರದ ಮೇಲೆ ಭೂ ದಾಖಲಾತಿ ಹಕ್ಕುಪತ್ರಗಳ ಪ್ರಕಾರ ಹಕ್ಕು ಹೊಂದಿದ ವ್ಯಕ್ತಿಯನ್ನು ಆ ಜಮೀನಿನಿಂದ ಹೊರಹಾಕಿದರೆ ಅಥವಾ ಎದುರು ಪಕ್ಷಕ್ಕೆ ಕುಮ್ಮಕ್ಕು ನೀಡಿದರೆ ಅದು ತೀವ್ರ ಸ್ವರೂಪದ ಕರ್ತವ್ಯ ಲೋಪವಾಗುತ್ತದೆ. ಮತ್ತು ಅಧಿಕಾರವನ್ನು ದುರಪಯೋಗ ಪಡಿಸಿಕೊಡಂತಾಗುತ್ತದೆ. ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ದ ಉಗ್ರ ಕ್ರಮ ಕೈಗೊಳ್ಳಲಾಗುವುದು.

1.6 ಕೃಷಿ ಭೂಮಿಗೆ ಸಂಬಂಧಪಟ್ಟಂತೆ ಯಾವುದೇ ಒಂದು ನ್ಯಾಯಾಲಯವು ಒಂದು ನಿಖರವಾದ ಆದೇಶ ಅಥವಾ ತಡೆಯಾಜ್ಞೆಯನ್ನು ನೀಡಿದಾಗ: ಯಾವುದೇ ವ್ಯಕ್ತಿಗಳು ಅಂತಹ ಆದೇಶ ಅಥವಾ ತಡೆಯಾಜ್ಞೆಯನ್ನು ಪೊಲೀಸ್ ಅಧಿಕಾರಿಗಳ ಮುಂದೆ ಹಾಜರುಪಡಿಸಿದಾಗ ಅಂತಹ ವ್ಯಕ್ತಿಗೆ ಆ ತಡೆಯಾಜ್ಞೆ ಅಥವಾ ನಿಖರವಾದ ಆದೇಶವನ್ನು ಆಯಾಯ ತಾಲ್ಲೂಕಿನ ತಹಶೀಲ್ದಾರರ ಮುಂದೆ ಹಾಜರುಪಡಿಸಿ, ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಲಿಖಿತ ಸೂಚನೆಯನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಬೇಕೆಂದು ತಿಳಿಸತಕ್ಕದ್ದು. ಯಾವುದೇ ಒಂದು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶನ ಬೇಕು ಎಂದೆನಿಸಿದಾಗ, ಅವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರು ಅಭಿಯೋಗ ಸಹಾಯಕ ನಿರ್ದೇಶಕರು, ಅಭಿಯೋಗ ಉಪ ನಿರ್ದೇಶಕರು ಅಥವಾ ಕಾನೂನು ಸಲಹೆಗಾರರ ಸಲಹೆ ಪಡೆದು, ಅವರು ನೀಡುವ ಸಲಹೆಗೆ ಅನುಸಾರವಾಗಿ ಕ್ರಮ ಕೈಗೊಳ್ಳತಕ್ಕದ್ದು.

2. ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶದಲ್ಲಿರುವ ನಿವೇಶಗಳು, ಕಟ್ಟಡಗಳು ಮತ್ತು ಕೃಷಿಯೇತರ ಭೂಮಿಗಳ ಮಾಲೀಕತ್ವ ಮತ್ತು ಸ್ವಾಧೀನತೆ ಕುರಿತು:-

2.1 ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶದಲ್ಲಿರುವ ನಿವೇಶನಗಳು, ಕಟ್ಟಡಗಳು ಮತ್ತು ಕೃಷಿಯೇತರ ಭೂಮಿಗಳ ಮಾಲೀಕತ್ವ ಮತ್ತು ಸ್ವಾಧೀನತೆಗೆ ಸಂಬಂಧಿಸಿದಂತೆ ಕರ್ನಾಟಕ ಮುನಿಸಿಪಾಲಿಟಿ ಅಧಿನಿಯಮ 1964 ಕಲಂ 107(ಎ)ರ ಪ್ರಕಾರ ಆಯಾಯ ಸ್ಥಳೀಯ ಪ್ರಾಧಿಕಾರದವರು ಕಾಪಾಡಿಕೊಂಡು ಬರುವ ಆಸ್ತಿಗಳ ಹಕ್ಕುಪತ್ರ; ಆಯಾಯ ನಿವೇಶಗಳು, ಕಟ್ಟಡ ಅಥವಾ ಕೃಷಿಯೇತರ ಜಮೀನಿನ ಮಾಲೀಕತ್ವ ಮತ್ತು ಸ್ವಾಧಿನತೆ ಯಾರ ಬಳಿ ಇದೆ ಎಂಬುದನ್ನು ನಿಖರವಾಗಿ ತಿಳಿಸುತ್ತದೆ. ಆಸ್ತಿಗಳ ಹಕ್ಕುಪತ್ರದಲ್ಲಿ ಆಯಾ ನಿವೇಶನ, ಕಟ್ಟಡ ಮತ್ತು ಕೃಷಿಯೇತರ ಜಮೀನಿನ ಅಳತೆ ಮತ್ತು ಚಕ್ಕುಬಂಧಿಯನ್ನು ನಮೂದಿಸಿರುತ್ತಾರೆ. ಈ ರೀತಿ ಕಾಪಾಡಿಕೊಂಡು ಬರುವ ಆಸ್ತಿ ಹಕ್ಕುಪತ್ರಗಳ ಪ್ರಮಾಣೀಕೃತ ಪ್ರತಿಯನ್ನು ಯಾವ ವ್ಯಕ್ತಿ ಹಾಜರುಪಡಿಸುತ್ತಾನೋ, ಆಸ್ತಿ ಹಕ್ಕುಪತ್ರಗಳಲ್ಲಿ ನಮೂದಿಸಿದ ವ್ಯಕ್ತಿಗೆ ಮತ್ತು ನಮೂದಿಸಿದ ಆಸ್ತಿಯ ವಿಸ್ತೀರ್ಣಕ್ಕನುಸಾರವಾಗಿ ಅವರಿಗೆ ರಕ್ಷಣೆ ನೀಡುವುದು ಸೂಕ್ತವಾಗಿರುತ್ತದೆ. ಕೃಷಿ ಭೂಮಿಗೆ ಸಂಬಂಧಪಟ್ಟಂತೆ ಭೂ ದಾಖಲೆಗಳ ಹಕ್ಕುಪತ್ರದಲ್ಲಿ ಯಾರ ಹೆಸರು ನಮೂದಿಸಿರುತ್ತದೆಯೋ ಅವರ ಹಕ್ಕಿಗೆ ಪೂರ್ವಾಗ್ರಹಿಕೆ ಮಾಡಬೇಕು, ಅದೇ ರೀತಿಯ ಪೂರ್ವಾಗ್ರಹಿಕೆ ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶದಲ್ಲಿರುವ ನಿವೇಶನಗಳು, ಕಟ್ಟಡಗಳಿಗೆ ಮತ್ತು ಕೃಷಿಯೇತರ ಭೂಮಿಗೆ ಸಂಬಂಧಿಸಿದಂತೆ ಪರಿಗಣಿಸಬೇಕಾಗಿರುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...