HomeIndiaಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2026: ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2026: ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಬೆಂಗಳೂರು-ರಾಜ್ಯದ ರೈತರ ಹಿತದೃಷ್ಟಿಯಿಂದ 2026ನೇ ಸಾಲಿನ ಖಾರೀಫ್ ಋತುವಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಅಡಿಯಲ್ಲಿ ಸಾಲ ಪಡೆದ ರೈತರಿಗೆ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಪಾವತಿಸಲು ನೀಡಲಾಗಿದ್ದ ಅಂತಿಮ ಅವಧಿಯನ್ನು ಆಗಸ್ಟ್ 31, 2026ರವರೆಗೆ ವಿಸ್ತರಿಸಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಮತ್ತು ಕೃಷಿ ಆಯುಕ್ತರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ, ರಾಜ್ಯದಲ್ಲಿ 2026ನೇ ಸಾಲಿನ ಖಾರೀಫ್ ಋತುವಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಸಾಲ ಪಡೆದ (Loanee) ರೈತರಿಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಹಾಗೂ ಪ್ರೀಮಿಯಂ ಮೊತ್ತ ಪಾವತಿಸಲು ಹೆಚ್ಚುವರಿ ಕಾಲಾವಕಾಶ ಕಲ್ಪಿಸಿದೆ.

ಅವಧಿ ವಿಸ್ತರಣೆಗೆ ಕಾರಣಗಳು

ರಾಜ್ಯದಲ್ಲಿ ವಿಮಾ ಯೋಜನೆಯ ಅಧಿಸೂಚನೆ ಹೊರಡಿಸುವಲ್ಲಿ ಉಂಟಾದ ವಿಳಂಬ, ವಿವಿಧ ಜಿಲ್ಲೆಗಳಲ್ಲಿ ಕಂಡುಬಂದ ಅಸಹಜ ಹವಾಮಾನ ವೈಪರೀತ್ಯ ಹಾಗೂ ತಾಂತ್ರಿಕ ಮತ್ತು ಕಾರ್ಯಾಚರಣೆಯ ಸವಾಲುಗಳಿಂದಾಗಿ ಹೆಚ್ಚಿನ ಸಂಖ್ಯೆಯ ರೈತರಿಗೆ ನಿಗದಿತ ಅವಧಿಯಲ್ಲಿ ನೋಂದಾಯಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಪ್ರಮುಖ ವಿಮಾ ಸಂಸ್ಥೆಗಳಾದ ಎಸ್‌ಬಿಐ ಜನರಲ್ ಇನ್ಶೂರೆನ್ಸ್, ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್, ಇಫ್ಕೋ ಟೋಕಿಯೋ ಜನರಲ್ ಇನ್ಶೂರೆನ್ಸ್ ಹಾಗೂ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ (AIC) ಸಂಸ್ಥೆಗಳು ಸಾಲಗಾರ ರೈತರ ನೋಂದಣಿ ಅವಧಿ ವಿಸ್ತರಣೆಗೆ ಸಮ್ಮತಿ ಸೂಚಿಸಿವೆ.

ವಿಸ್ತರಿತ ಅವಧಿಯಲ್ಲಿ ನೋಂದಾಯಿಸಿಕೊಳ್ಳುವ ಅರ್ಹ ರೈತರಿಗೆ ನಿಯಮಾನುಸಾರ ಕೇಂದ್ರ ಸರ್ಕಾರದ ಪಾಲಿನ ಪ್ರೀಮಿಯಂ ಸಹಾಯಧನವೂ ಲಭ್ಯವಾಗಲಿದೆ.

ಯಾವ ಜಿಲ್ಲೆಗಳ ಯಾವ ಬೆಳೆಗಳಿಗೆ ಅನ್ವಯ

*ಯಾವ ಜಿಲ್ಲೆಗಳ ಯಾವ ಬೆಳೆಗಳಿಗೆ ಅನ್ವಯ*

ಈ ಅವಧಿ ವಿಸ್ತರಣೆಯು ರಾಜ್ಯದ ವಿವಿಧ ಜಿಲ್ಲೆಗಳ ನಿರ್ದಿಷ್ಟ ನೀರಾವರಿ ಹಾಗೂ ಮಳೆ ಆಶ್ರಿತ ಬೆಳೆಗಳಿಗೆ ಅನ್ವಯವಾಗಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ಮೈಸೂರು, ಹಾಸನ, ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಭತ್ತ, ರಾಗಿ, ಮೆಕ್ಕೆಜೋಳ ಮತ್ತು ಹುರುಳಿ ಬೆಳೆಗಳಿಗೆ ಅನ್ವಯವಾಗಲಿದೆ.

ಬಾಗಲಕೋಟೆ, ಬಳ್ಳಾರಿ, ರಾಯಚೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಈರುಳ್ಳಿ, ಒಣ ಮೆಣಸಿನಕಾಯಿ, ಸೂರ್ಯಕಾಂತಿ, ಕಡಲೆಕಾಯಿ, ನವಣೆ, ಜೋಳ/ಬಾಜ್ರಾ ಹಾಗೂ ಹುರುಳಿ ಬೆಳೆಗಳಿಗೆ ಅನ್ವಯವಾಗಲಿದೆ.

ಚಿಕ್ಕಮಗಳೂರು, ಧಾರವಾಡ, ತುಮಕೂರು, ಉತ್ತರ ಕನ್ನಡ, ವಿಜಯನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭತ್ತ, ರಾಗಿ, ಸಾಮೆ, ನವಣೆ ಹಾಗೂ ಒಣ ಮೆಣಸಿನಕಾಯಿ ಬೆಳೆಗಳಿಗೆ ಅನ್ವಯವಾಗಲಿದೆ.

ವಿಸ್ತರಿತ ಅವಧಿಯಲ್ಲಿ ಯಾವುದೇ ದುರುಪಯೋಗ ಅಥವಾ ಅಕ್ರಮಗಳಿಗೆ ಆಸ್ಪದವಾಗದಂತೆ ರಾಜ್ಯ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗರಿಷ್ಠ ಸಂಖ್ಯೆಯ ಅರ್ಹ ಸಾಲಗಾರ ರೈತರು ಯೋಜನೆಯಡಿ ನೋಂದಾಯಿಸಿಕೊಳ್ಳುವಂತೆ ಎಲ್ಲಾ ಮಾಧ್ಯಮಗಳು ಹಾಗೂ ನೋಂದಣಿ ಕೇಂದ್ರಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸುವಂತೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.

ಅರ್ಹ ರೈತರಿಗೆ ಹೇಳಿಕೆ

*ಅರ್ಹ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆಗಸ್ಟ್ 31, 2026ರೊಳಗೆ ಬೆಳೆ ವಿಮೆಗೆ ನೋಂದಾಯಿಸಿಕೊಂಡು ಪ್ರೀಮಿಯಂ ಪಾವತಿಸುವಂತೆ ಕೃಷಿ ಇಲಾಖೆ ಮನವಿ ಮಾಡಿದೆ*.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular