ಉತ್ತರ ಕರ್ನಾಟಕದ ಜನರು ಅದರಲ್ಲೂ ಹುಬ್ಬಳ್ಳಿಯ ಜನರು ಫ್ರಾನ್ಸ್ನಿಂದ ಬರುವ ವಿಮಾನಕ್ಕಾಗು ಕಾದು ಕುಳಿತಿದ್ದಾರೆ. ಹೌದು ಫ್ಲೈ-91 ಪ್ರಾದೇಶಿಕ ವಿಮಾನಯಾನ ಸಂಸ್ಥೆ ಹುಬ್ಬಳ್ಳಿಗೆ ಕಾರ್ಯಾಚರಣೆ ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಇದಕ್ಕೆ ಅಗತ್ಯ ಇರುವ ವಿಮಾನ ಇನ್ನೂ ಬರಬೇಕಿದೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಫ್ಲೈ-91 2025ರಲ್ಲಿಯೇ ಹುಬ್ಬಳ್ಳಿಯಿಂದ ವಿಮಾನ ಸೇವೆ ಆರಂಭ ಮಾಡುವುದಾಗಿ ಘೋಷಣೆ ಮಾಡಿತ್ತು. ಇದಕ್ಕಾಗಿ ಸಂಸ್ಥೆಯು ದುಬೈ ಏರೋಸ್ಪೇಸ್ ಎಂಟರ್ಪ್ರೈಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, 2 ಹೊಸ ಎಟಿಆರ್-72-600 ವಿಮಾನಗಳನ್ನು ಗುತ್ತಿಗೆಗೆ ಪಡೆಯುತ್ತಿದೆ.
ಆದರೆ ಈ ವಿಮಾನಗಳು ಫ್ರಾನ್ಸ್ನಿಂದ ಬರಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಜನವರಿ ಅಂತ್ಯಗೊಳಗೆ ವಿಮಾನಗಳು ಬರಲಿದ್ದು, ಹುಬ್ಬಳ್ಳಿಯಿಂದ ಸಂಚಾರವನ್ನು ಆರಂಭಿಸಲಿವೆ. ಆದರೆ ನಿಗದಿತ ದಿನಾಂಕ ಮಾತ್ರ ಇನ್ನೂ ಅಂತಿಮವಾಗಿಲ್ಲ.
ಯಾವ ಮಾರ್ಗಗಳು: ಫ್ಲೈ-91 ಸಂಸ್ಥೆಯು ಹುಬ್ಬಳ್ಳಿ-ಬೆಂಗಳೂರು ಮತ್ತು ಹುಬ್ಬಳ್ಳಿ-ಹೈದರಾಬಾದ್ ನಡುವೆ ವಿಮಾನಯಾನ ನಡೆಸಲು ಅನುಮತಿ ಕೋರಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರವು ಇದಕ್ಕೆ ಅನುಮೋದನೆಯನ್ನು ನೀಡಿದೆ. ವಿಮಾನಗಳು ಬಂದರೆ ಕಾರ್ಯಾಚರಣೆ ಆರಂಭವಾಗಲಿದೆ.
ಫೆಬ್ರವರಿ ಮೊದಲ ವಾರದಲ್ಲಿ ಫ್ಲೈ-91 ಸಂಸ್ಥೆಯ ಅಧಿಕಾರಿಗಳು ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ಮಾರ್ಚ್ ತಿಂಗಳಿನಿಂದ ಅಧಿಕೃತವಾಗಿ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಹುಬ್ಬಳ್ಳಿಯಿಂದ ವಿವಿಧ ನಗರಕ್ಕೆ ವಿಮಾನ ಸೇವೆ ಇದೆ. ಇಂಡಿಗೋ ಸಂಸ್ಥೆಯು ಹೈದರಾಬಾದ್ ಮತ್ತು ಹುಬ್ಬಳ್ಳಿ ನಡುವೆ ಮತ್ತೊಂದು ಹೆಚ್ಚುವರಿ ವಿಮಾನ ಓಡಿಸಲು ಅನುಮತಿಯನ್ನು ಪಡೆದಿದೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ.
ಈ ಕುರುತು ಮಾತನಾಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಶ್ರೀಪಾದ್, “ಹೊಸ ವಿಮಾನಗಳ ಸೇರ್ಪಡೆಯಿಂದ ಪ್ರವಾಸೋದ್ಯಮ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ” ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯ ಸುನಿಲ್ ನಲವಡೆ ಮಾತನಾಡಿ, “ಕರ್ನಾಟಕದಲ್ಲಿ ವಿಮಾನಯಾನಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಈ ಹೊಸ ಸೇವೆಗಳು ಪ್ರದೇಶದ ಆರ್ಥಿಕತೆಗೆ ಬಲ ತುಂಬಲಿವೆ” ಎಂದು ತಿಳಿಸಿದರು.
ಫ್ಲೈ-91 ಹುಬ್ಬಳ್ಳಿಗೆ ಸೇವೆ ವಿಸ್ತರಣೆ ಮಾಡುವ ಮೂಲಕ ಭಾರತದ 2ನೇ ಮತ್ತು 3ನೇ ಹಂತದ ನಗರಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಸಂಸ್ಥೆಯ ಸಿಇಒ ಮನೋಜ್ ಚಾಕೊ ಹೇಳಿದ್ದಾರೆ.
ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಸೇವೆಯನ್ನು ವಿಸ್ತರಣೆ ಮಾಡಲು ಸಂಸ್ಥೆ ಉದ್ದೇಶಿಸಿದೆ. ಹುಬ್ಬಳ್ಳಿ, ವಿಜಯವಾಡ, ರಾಜಮಂಡ್ರಿ, ನಾಂದೇಡ್, ಡಬೋಲಿನ್ಗೆ ಸೇವೆ ಪ್ರಾರಂಭಿಸಲು ಎರಡು ಎಟಿಆರ್ 72-600 ವಿಮಾನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಮನೋಜ್ ಚಾಕೊ ತಿಳಿಸಿದ್ದಾರೆ.
ಈಗ ಸಂಸ್ಥೆ ಸಂಚಾರವನ್ನು ನಡೆಸುತ್ತಿರುವ ಮಾರ್ಗದಲ್ಲಿ ಹೆಚ್ಚಿನ ವಿಮಾನಗಳನ್ನು ಸಹ ಹಾರಾಟ ನಡೆಸುವ ಚಿಂತನೆ ಇದೆ. ಫ್ರಾನ್ಸ್ನಿಂದ ವಿಮಾನಗಳು ಬಂದ ಬಳಿಕ ಈ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದರು.

