ಹುಬ್ಬಳ್ಳಿ: ರಾಜ್ಯದಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. 2028ರವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್, ಯಾವ ಬದಲಾವಣೆಯೂ ಆಗುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸೆಪ್ಟೆಂಬರ್ ಕ್ರಾಂತಿ ಎಂದರು, ನವೆಂಬರ್ ಕ್ರಾಂತಿ ಎಂದರು ನವೆಂಬರ್ ಹೋಗಿ ಡಿಸೆಂಬರ್ ಕೂಡ ಕಳೆದು ಹೋಯಿತು. ಯಾವ ಕ್ರಾಂತಿಯೂ ಆಗಿಲ್ಲ. ಯುಗಾದಿಗೂ ಯಾಅವ ಕ್ರಾಂತಿ ಆಗಲ್ಲ. ಸಿದ್ದರಾಮಯ್ಯನವರೇ 2028ರವರೆಗೂ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.
ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಹೇಳಿದಂತೆ ನಾವು ಕೇಳಬೇಕು. ಹೈಕಮಾಂಡ್ ನಿರ್ಧಾರವೇ ಅಂತಿಮ. 2028ರವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ. ಅವರು ಐದು ವರ್ಷ ಪೂರ್ಣಗೊಳಿಸುವ ವಿಶ್ವಾಸವಿದೆ. ನಂತರ ಯಾರುಬೇಕಾದರೂ ಸಿಎಂ ಆಗಲಿ. ಡಿ.ಕೆ.ಶಿವಕುಮಾರ್ ಅವರನ್ನು ಮಾಡುತ್ತಾರೋ ಮಾಡಲಿ, ಬೀದಿಯಲ್ಲಿ ಹೋಗೋ ದಾಸಯ್ಯನನ್ನು ಕರೆದು ಸಿಎಂ ಮಾಡಿದರೂ ಹೈಕಮಾಂಡ್ ಹೇಳಿದರೆ ನಾವು ಒಪ್ಪುತ್ತೇವೆ. ನಮ್ಮದು ಹೈಕಮಾಂಡ್ ಪಕ್ಷ ಎಂದು ಹೇಳಿದರು.

