HomeIndiaಮೊಬೈಲ್ EMI ಕಟ್ಟದ್ದಕ್ಕೆ ಯುವಕನ ರಕ್ತ ಮಾರಾಟ ; ಫೈನಾನ್ಸ್ ಕಂಪನಿ ಸಿಬ್ಬಂದಿಯ ಅಮಾನವೀಯ ಕೃತ್ಯ...

ಮೊಬೈಲ್ EMI ಕಟ್ಟದ್ದಕ್ಕೆ ಯುವಕನ ರಕ್ತ ಮಾರಾಟ ; ಫೈನಾನ್ಸ್ ಕಂಪನಿ ಸಿಬ್ಬಂದಿಯ ಅಮಾನವೀಯ ಕೃತ್ಯ !

ಮೊಬೈಲ್ ಫೋನ್ ಖರೀದಿಗೆ ಪಡೆದಿದ್ದ ಸಾಲದ ಮಾಸಿಕ ಕಂತು (EMI) ಕಟ್ಟಲು ವಿಫಲನಾದ ನಿರುದ್ಯೋಗಿ ಯುವಕನೊಬ್ಬನನ್ನು ಅಪಹರಿಸಿ, ಆತನಿಂದ ಬಲವಂತವಾಗಿ ರಕ್ತದಾನ ಮಾಡಿಸಿ ಹಣ ಪಡೆದುಕೊಂಡಿದ್ದಲ್ಲದೆ, ಆತನನ್ನು ನಾಲ್ಕು ದಿನಗಳ ಕಾಲ ಕೂಡಿಹಾಕಿ ಜೀತದಾಳುವಿನಂತೆ ಮನೆಗೆಲಸ ಮಾಡಿಸಿಕೊಂಡಿರುವ ಆಘಾತಕಾರಿ ಘಟನೆ ಲಕ್ನೋದಲ್ಲಿ ಬೆಳಕಿಗೆ ಬಂದಿದೆ. ಈ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಖಾಸಗಿ ಫೈನಾನ್ಸ್ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅನಿಕೇತ್ ಸಿಂಗ್ ಮತ್ತು ಸುಶಾಂತ್ ಶರ್ಮಾ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಶುಭಂ ಸಿಂಗ್ ಪತ್ತೆಗೆ ಪೊಲೀಸರು 25,000 ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.

ಘಟನೆಯ ವಿವರಗಳ ಪ್ರಕಾರ, ಲಕ್ನೋದ ನಿಗೋಹನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾರಾಮ್‌ಖೇರಾ ಗ್ರಾಮದ ನಿವಾಸಿ ನೆವಲ್ ಎಂಬ ಯುವಕ ಕಳೆದ ಜುಲೈ ಅಂತ್ಯದಲ್ಲಿ ಸ್ಥಳೀಯ ಅಂಗಡಿಯೊಂದರಲ್ಲಿ 21,500 ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಖರೀದಿಸಿದ್ದನು. ಆತನಿಗೆ ಯಾವುದೇ ಉದ್ಯೋಗ ಅಥವಾ ನಿಶ್ಚಿತ ಆದಾಯದ ಮೂಲವಿಲ್ಲದಿದ್ದರೂ, ಗೋಮತಿನಗರದ ಖಾಸಗಿ ಫೈನಾನ್ಸ್ ಕಂಪನಿಯು ಒಂದು ವರ್ಷದ ಅವಧಿಗೆ ತಿಂಗಳಿಗೆ 2,799 ರೂಪಾಯಿ ಇಎಂಐ ಆಧಾರದಲ್ಲಿ ಸಾಲ ಮಂಜೂರು ಮಾಡಿತ್ತು. ಆದರೆ, ಆದಾಯವಿಲ್ಲದ ಕಾರಣ ನೆವಲ್‌ಗೆ ಮೊದಲ ತಿಂಗಳ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೆಪ್ಟೆಂಬರ್ 8 ರಂದು ಸಾಲ ವಸೂಲಾತಿ ಏಜೆಂಟರಾದ ಅನಿಕೇತ್ ಮತ್ತು ಶುಭಂ ಯುವಕನ ಮನೆಗೆ ನುಗ್ಗಿ ಆತನನ್ನು ಬಲವಂತವಾಗಿ ಕರೆದೊಯ್ದಿದ್ದರು. ಆತನನ್ನು ರಕ್ತನಿಧಿ ಕೇಂದ್ರಕ್ಕೆ (Blood Bank) ಕರೆದೊಯ್ದ ಆರೋಪಿಗಳು, ಅಲ್ಲಿ ಆತನಿಂದ ಒತ್ತಾಯಪೂರ್ವಕವಾಗಿ ಒಂದು ಯುನಿಟ್ ರಕ್ತ ಪಡೆದು ಅದರಿಂದ ಬಂದ ಹಣವನ್ನು ಕಸಿದುಕೊಂಡಿದ್ದಾರೆ. ನಂತರ ಆತನನ್ನು ಶುಭಂ ಎಂಬಾತನ ಮನೆಗೆ ಕರೆದೊಯ್ದು ನಾಲ್ಕು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟುಕೊಂಡು ಮನೆಗೆಲಸದಾಳುವಿನಂತೆ ದುಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಯುವಕನನ್ನು ಬಿಡುಗಡೆ ಮಾಡಲು ಆತನ ಸಹೋದರ ರಾಜ್‌ಕುಮಾರ್‌ನಿಂದಲೂ ಒಂದು ತಿಂಗಳ ಇಎಂಐ ಮೊತ್ತವನ್ನು ವಸೂಲಿ ಮಾಡಿದ್ದಾರೆ.

ಮಗನನ್ನು ಅಪಹರಿಸಿ ಕರೆದೊಯ್ದ ಬಗ್ಗೆ ತಾಯಿ ನೀಡಿದ ದೂರಿನ ಮೇರೆಗೆ ಸೆಪ್ಟೆಂಬರ್ 14 ರಂದು ಪ್ರಕರಣ ದಾಖಲಿಸಿಕೊಂಡ ಲಕ್ನೋ ದಕ್ಷಿಣ ವಿಭಾಗದ ಪೊಲೀಸರು, ಕರೆ ವಿವರಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಲವಂತವಾಗಿ ರಕ್ತ ಪಡೆದ ರಕ್ತನಿಧಿ ಕೇಂದ್ರ ಹಾಗೂ ಈ ಅಕ್ರಮದಲ್ಲಿ ಫೈನಾನ್ಸ್ ಕಂಪನಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದ್ದು, ಸಾಕ್ಷ್ಯಾಧಾರಗಳು ಸಿಕ್ಕರೆ ಅವುಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಮೊಹಮ್ಮದ್ ಮುಷ್ತಾಕ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular