ನವದೆಹಲಿ: 2018 ರ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ದೆಹಲಿ ಕೋರ್ಟ್ ಹೊಸ ವಾರಂಟ್ ಹೊರಡಿಸಿದೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊವೊಂದಕ್ಕೆ ಸಂಬಂಧಿಸಿದ 2018ರ ಮಾನನಷ್ಟ ಮೊಕದ್ದಮೆಯಲ್ಲಿ, ಯೂಟ್ಯೂಬರ್ ಧ್ರುವ ರಾಠೀ ವಿರುದ್ಧ ದೆಹಲಿ ನ್ಯಾಯಾಲಯವು ಶನಿವಾರ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ.
‘ಬಿಜೆಪಿ ಐಟಿ ಸೆಲ್ ಪಾರ್ಟ್ II’ (BJP IT Cell Part II) ಎಂಬ ಶೀರ್ಷಿಕೆಯ ವೀಡಿಯೊಗೆ ಸಂಬಂಧಿಸಿದಂತೆ ವಿಕಾಸ್ ಸಂಸ್ಕೃತ್ಯಾಯನ್ ಅವರು ಈ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
‘ಬಾರ್ ಅಂಡ್ ಬೆಂಚ್’ (Bar and Bench) ವರದಿಯ ಪ್ರಕಾರ, ಈ ಹಿಂದೆ ನೋಟಿಸ್ ನೀಡಲು ಹೋದಾಗ ಧ್ರುವ ರಾಠಿ ಅವರ ಮನೆಗೆ ಬೀಗ ಹಾಕಲಾಗಿತ್ತು ಎಂಬ ವಿಷಯ ನ್ಯಾಯಾಲಯಕ್ಕೆ ತಿಳಿದುಬಂದ ನಂತರ, ದಕ್ಷಿಣ-ಪೂರ್ವ ವಿಭಾಗದ ಪ್ರಥಮ ದರ್ಜೆ ನ್ಯಾಯಾಂಗದ ಮ್ಯಾಜಿಸ್ಟ್ರೇಟ್ ರಾಹುಲ್ ಜೈನ್ ಅವರು ಇಂದು ಶನಿವಾರ ಈ ಹೊಸ ವಾರಂಟ್ಗಳನ್ನು ಹೊರಡಿಸಿದ್ದಾರೆ. ಈ ಪ್ರಕರಣದ ವಿಚಾರಣೆಯು ಅಕ್ಟೋಬರ್ 31 ರಂದು ನಡೆಯಲಿದೆ.
ಏನಿದು ಪ್ರಕರಣ?
ಧ್ರುವ ರಾಠಿ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಮಾನನಷ್ಟ ಉಂಟುಮಾಡುವಂತಿದೆ ಎಂದು ಆರೋಪಿಸಿ ವಿಕಾಸ್ ಸಂಸ್ಕೃತ್ಯಾಯನ್ ಅವರು ದೂರು ದಾಖಲಿಸಿದ್ದರು. ದೂರಿನ ಪ್ರಕಾರ, ಯೂಟ್ಯೂಬರ್ ಪ್ರಕಟಿಸಿ ಹಂಚಿದ ವೀಡಿಯೊದಲ್ಲಿ ದೂರುದಾರರ ವಿರುದ್ಧ ಹಲವಾರು ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
ಈ ವಾರದ ಆರಂಭದಲ್ಲಿ, ದೂರುದಾರರು ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದ ದಿನಾಂಕಕ್ಕಿಂತ ಮುಂಚಿತವಾಗಿ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ ನಂತರ, ನ್ಯಾಯಾಲಯವು ರಾಠಿ ಅವರಿಗೆ ಹೊಸ ಸಮನ್ಸ್ ಜಾರಿ ಮಾಡಿತ್ತು.
ಜರ್ಮನಿಯಲ್ಲಿ ವಾಸಿಸುವ ಧ್ರುವ ರಾಠಿ, ವಿವಾದಾತ್ಮಕ ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ (SIR) ಪ್ರಕ್ರಿಯೆಯ ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗವಹಿಸಲು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಲು ಭಾರತಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ, ವಿಚಾರಣೆಯನ್ನು ಬೇಗ ನಡೆಸುವಂತೆ ಕೋರಲಾಗಿತ್ತು. ಈ ಹೊಸ ಸಮನ್ಸ್ ಅನ್ನು ಅಕ್ಟೋಬರ್ 12, ಸೋಮವಾರದಂದು ಹೊರಡಿಸಲಾಗಿತ್ತು.
ಸಿಜೆಪಿ ಪ್ರತಿಭಟನೆಗಳಲ್ಲಿ ಧ್ರುವ ರಾಠಿ ಭಾಗಿ
ಎಸ್ಐಆರ್ ವಿಷಯಕ್ಕೆ ಸಂಬಂಧಿಸಿದಂತೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಧ್ರುವ ರಾಠಿ ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ಆಗಮಿಸಿದ್ದರು. ಈ ಪ್ರತಿಭಟನೆಯು SIR ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದೆ.

