ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’ದ ಬಗ್ಗೆ ಈಗ ಹೊಸದೊಂದು ಕುತೂಹಲಕಾರಿ ವಿಚಾರ ಹೊರಬಿದ್ದಿದೆ. ಈ ಚಿತ್ರದಲ್ಲಿ ನಟ ರಣಬೀರ್ ಕಪೂರ್ ರಾಮನಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಇವರಿಬ್ಬರೂ ಸಿನಿಮಾದ ಮೊದಲ ಭಾಗದಲ್ಲಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಅಚ್ಚರಿಯ ವಿಷಯವನ್ನು ಸ್ವತಃ ಯಶ್ ಅವರೇ ಬಹಿರಂಗಪಡಿಸಿದ್ದಾರೆ.
ಯಶ್ ಹೇಳಿದ್ದೇನು? ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ 2026 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಶ್, ಅಂತರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯ ಹಂಚಿಕೊಂಡಿದ್ದಾರೆ. “ರಾಮಾಯಣ ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ. ಮೊದಲ ಭಾಗದಲ್ಲಿ ರಾವಣನಾಗಿ ನನ್ನದೇ ಆದ ಸಾಮ್ರಾಜ್ಯದ ಕಥೆ ಇರುತ್ತದೆ ಮತ್ತು ರಾಮನಾಗಿ ರಣಬೀರ್ ಅವರ ಸಾಮ್ರಾಜ್ಯದ ಕಥೆ ಇರುತ್ತದೆ. ಹೀಗಾಗಿ ಮೊದಲ ಭಾಗದಲ್ಲಿ ನಾವಿಬ್ಬರೂ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯಗಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪರಸ್ಪರ ಗೌರವ ಮತ್ತು ಕೆಲಸದ ಶೈಲಿ ರಣಬೀರ್ ಕಪೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯಶ್, “ನಾವು ಕೆಲವು ಬಾರಿ ಭೇಟಿಯಾಗಿದ್ದೇವೆ, ರಣಬೀರ್ ಅದ್ಭುತ ನಟ. ನಾವೆಲ್ಲರೂ ರಾಮಾಯಣದಂತಹ ಮಹತ್ವಾಕಾಂಕ್ಷೆಯ ಕಥೆಯನ್ನು ಜಗತ್ತಿಗೆ ಪರಿಚಯಿಸಲು ಒಂದಾಗಿದ್ದೇವೆ. ನಾವಿಬ್ಬರೂ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಶ್ರಮಿಸುತ್ತಿದ್ದೇವೆ” ಎಂದಿದ್ದಾರೆ. ಇನ್ನು ಈ ಚಿತ್ರದಲ್ಲಿ ರಾವಣನನ್ನು ಕೇವಲ ವಿಲನ್ ಆಗಿ ತೋರಿಸದೆ, ವಿಭಿನ್ನ ಆಯಾಮದಲ್ಲಿ ಚಿತ್ರಿಸಲು ನಿರ್ದೇಶಕ ನಿತೇಶ್ ತಿವಾರಿ ನಿರ್ಧರಿಸಿದ್ದಾರೆ.
ದೀಪಾವಳಿಗೆ ರಾಮಾಯಣ ದರ್ಶನ ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿರುವ ಈ ಬೃಹತ್ ಚಿತ್ರ 2026ರ ದೀಪಾವಳಿ ಹಬ್ಬದಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕೂಡ ಜೂನ್ 4 ರಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ರಾಮಾಯಣದ ಮೂಲಕ ಭಾರತೀಯ ಇತಿಹಾಸವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಇಡೀ ತಂಡ ಸಜ್ಜಾಗಿದೆ.

