ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ಕಾರಾ’ ಚಿತ್ರ ಏಪ್ರಿಲ್ 30 ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಇದರ ನಡುವೆಯೇ ನಿರ್ದೇಶಕ ತಮಿಳರಸನ್ ಪಚ್ಚಮುತ್ತು ಅವರ ಜೊತೆಗಿನ ಧನುಷ್ ಅವರ ಹೊಸ ಪ್ರಾಜೆಕ್ಟ್ ಸುದ್ದಿಯಲ್ಲಿದೆ. ಈ ಚಿತ್ರದ ನಾಯಕಿ ಬದಲಾವಣೆಯ ವಿಚಾರ ಈಗ ಕಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
ದಿನಾಂಕ ಸಮಸ್ಯೆಯಿಂದ ಹೊರಬಿದ್ದ ರುಕ್ಮಿಣಿ ವಸಂತ್? ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ದಕ್ಷಿಣ ಭಾರತದಾದ್ಯಂತ ಜನಪ್ರಿಯತೆ ಗಳಿಸಿರುವ ರುಕ್ಮಿಣಿ ವಸಂತ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಈಗ ಲಭ್ಯವಿರುವ ಮಾಹಿತಿಯ ಪ್ರಕಾರ, ರುಕ್ಮಿಣಿ ಈ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಡೇಟ್ಸ್ ಸಮಸ್ಯೆ. ರುಕ್ಮಿಣಿ ಅವರು ಸದ್ಯ ಜೂನಿಯರ್ ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಬಹುನಿರೀಕ್ಷಿತ ಚಿತ್ರಕ್ಕೆ ಹೆಚ್ಚಿನ ದಿನಾಂಕಗಳನ್ನು ನೀಡಿದ್ದಾರೆ. ಇದರಿಂದಾಗಿ ಧನುಷ್ ಚಿತ್ರಕ್ಕೆ ಸಮಯ ಹೊಂದಿಸಲು ಸಾಧ್ಯವಾಗದ ಕಾರಣ ಅವರು ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.
ಅವಕಾಶ ಗಿಟ್ಟಿಸಿಕೊಂಡ ಸಾರಾ ಅರ್ಜುನ್ ರುಕ್ಮಿಣಿ ವಸಂತ್ ನಿರ್ಗಮನದ ಬೆನ್ನಲ್ಲೇ ಆ ಸ್ಥಾನಕ್ಕೆ ನಟಿ ಸಾರಾ ಅರ್ಜುನ್ ಅವರನ್ನು ಕರೆತರಲು ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ಧುರಂಧರ್’ ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿರುವ ಸಾರಾ ಅರ್ಜುನ್ ಅವರಿಗೆ ಇದು ದೊಡ್ಡ ಬ್ರೇಕ್ ಆಗಲಿದೆ. ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಸಾರಾ ಈಗ ಧನುಷ್ ಅಂತಹ ದೊಡ್ಡ ನಟನಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡುವ ನಿರೀಕ್ಷೆಯಿದೆ.
ಈ ಬದಲಾವಣೆಯ ಕುರಿತು ಚಿತ್ರತಂಡದಿಂದ ಅಧಿಕೃತ ಘೋಷಣೆ ಬಾಕಿ ಇದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಾರಾ ಅರ್ಜುನ್ ಎಂಟ್ರಿ ಬಗ್ಗೆ ಈಗಾಗಲೇ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.

