HomeLatest NewsWPL 2026: ಮುಂಬೈ ವಿರುದ್ಧ ಸೋತ ಆರ್‌ಸಿಬಿ; ಟೂರ್ನಿಯಲ್ಲಿದು ಎರಡನೇ ಸೋಲು

WPL 2026: ಮುಂಬೈ ವಿರುದ್ಧ ಸೋತ ಆರ್‌ಸಿಬಿ; ಟೂರ್ನಿಯಲ್ಲಿದು ಎರಡನೇ ಸೋಲು

ವಡೋದರಾದ ಕೊಟಂಬಿಯ ಬಿಸಿಎ ಸ್ಟೇಡಿಯಂನಲ್ಲಿ ನಡೆದ ವನಿತೆಯರ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 15 ರನ್‌ಗಳ ಗೆಲುವನ್ನು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆರಿಸಿಕೊಂಡು ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನ್ಯಾಟ್ ಸೀವರ್ ಬ್ರಂಟ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿ ಆರ್‌ಸಿಬಿಗೆ 200 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆರ್‌ಸಿಬಿ ಟೂರ್ನಿಯಲ್ಲಿ ಎರಡನೇ ಸೋಲನ್ನು ಅನುಭವಿಸಿದೆ. 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿದೆ. 7 ಪಂದ್ಯಗಳನ್ನಾಡಿ 5ರಲ್ಲಿ ಗೆದ್ದು, ಎರಡರಲ್ಲಿ ಸೋತಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಈ ಪಂದ್ಯದ ಬಳಿಕವೂ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಜೀವನ್ ಸಂಜನಾ ಕೇವಲ 7 ರನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸೀವರ್ ಬ್ರಂಟ್ 131 ರನ್‌ಗಳ ಜತೆಯಾಟವನ್ನಾಡುವ ಮೂಲಕ ತಂಡವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ದರು. ಹೇಲಿ ಮ್ಯಾಥ್ಯೂಸ್ 56 ರನ್ ಗಳಿಸಿದರೆ, ನ್ಯಾಟ್ ಸೀವರ್ ಬ್ರಂಟ್ 57 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 100 ರನ್ ಬಾರಿಸಿದರು. ಇನ್ನುಳಿದಂತೆ ನಾಯಕಿ ಹರ್ಮನ್‌ಪ್ರೀತ್ ಕೌರ್ 20, ಅಮನ್‌ಜೋತ್ ಕೌರ್ 4 ಹಾಗೂ ಅಮೆಲಿಯಾ ಕೆರ್ ಅಜೇಯ 1 ರನ್ ದಾಖಲಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಲಾರೆನ್ ಬೆಲ್ ಎರಡು ವಿಕೆಟ್, ನಡೈನ್ ಡಿ ಕ್ಲರ್ಕ್ ಹಾಗೂ ಶ್ರೇಯಾಂಕ ಪಾಟೀಲ್ ತಲಾ ಒಂದೊಂದು ವಿಕೆಟ್ ಪಡೆದರು.

ಆರ್‌ಸಿಬಿ ಇನ್ನಿಂಗ್ಸ್: ಮುಂಬೈ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಲು ಮುಂದಾದ ಆರ್‌ಸಿಬಿ ಕೇವಲ 20 ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು 35 ರನ್ ಮುಟ್ಟುವಷ್ಟರಲ್ಲಿ ತನ್ನ 5 ವಿಕೆಟ್ ಕಳೆದುಕೊಂಡು ಅತಿಕೆಟ್ಟ ಆರಂಭ ಪಡೆದುಕೊಂಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ 15, ನಾಯಕಿ ಸ್ಮೃತಿ ಮಂಧಾನ 6, ಜಾರ್ಜಿಯಾ ವೋಲ್ 9, ಗೌತಮಿ ನಾಯಕ್ 1, ರಾಧಾ ಯಾದವ್ ಡಕ್‌ಔಟ್, ನಡೈನ್ ಡಿ ಕ್ಲರ್ಕ್ 28, ಅರುಂಧತಿ ಘೋಷ್ 14, ಸಯಾಲಿ ಸಟ್ಘಾರೆ ಡಕ್‌ಔಟ್, ಶ್ರೇಯಾಂಕ ಪಾಟೀಲ್ ಅಜೇಯ 12 ರನ್ ಗಳಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ನೆಲಕಚ್ಚಿ ನಿಂತ ರಿಚಾ ಷೋಷ್ ಸೋಲುವ ಪಂದ್ಯವನ್ನು ಕೊನೆಯ ಓವರ್‌ವರೆಗೂ ತಂದು ಕೊನೆಯ ಹಂತದಲ್ಲಿ ಸಿಕ್ಸರ್ ಸುರಿಮಳೆ ಸುರಿಸುವ ಮೂಲಕ ಗೆಲುವಿನ ಭರವಸೆಯನ್ನು ಸಹ ಹುಟ್ಟುಹಾಕಿದ್ದರು. ರಿಚಾ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 90 ರನ್ ಬಾರಿಸಿದರು.

ಮುಂಬೈ ಪರ ಹೇಲಿ ಮ್ಯಾಥ್ಯೂಸ್ ಮೂರು ವಿಕೆಟ್, ಅಮೆಲಿಯಾ ಕೆರ್ ಹಾಗೂ ಶಬ್ನಿಮ್ ಇಸ್ಮಾಯಿಲ್ ತಲಾ ಎರಡು ವಿಕೆಟ್ ಮತ್ತು ಅಮನ್‌ಜೋತ್ ಕೌರ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
RELATED ARTICLES

Most Popular