ಆಸ್ಮರಾ: ನಾವು ಇಂದು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಹತ್ತಾರು ಬಾರಿ ಇಂಟರ್ನೆಟ್ ಬಳಸುತ್ತೇವೆ. ಹಣ ವರ್ಗಾವಣೆ, ಆಹಾರ ಆರ್ಡರ್ ಮಾಡುವುದು ಅಥವಾ ಸಾಮಾಜಿಕ ಜಾಲತಾಣಗಳ ಬಳಕೆ ಹೀಗೆ ಪ್ರತಿಯೊಂದಕ್ಕೂ ಅಂತರ್ಜಾಲವೇ ಬೇಕು. ಆದರೆ, ಪೂರ್ವ ಆಫ್ರಿಕಾದ ಎರಿಟ್ರಿಯಾ (Eritrea) ಎಂಬ ದೇಶದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇಲ್ಲಿನ ಶೇ. 99 ರಷ್ಟು ಜನರಿಗೆ ಇಂಟರ್ನೆಟ್ ಎಂದರೇನು ಎಂದೇ ತಿಳಿದಿಲ್ಲ!
99% ಜನರಿಗೆ ಅಂತರ್ಜಾಲದ ಸಂಪರ್ಕವೇ ಇಲ್ಲ ಕೆಂಪು ಸಮುದ್ರದ ದಡದಲ್ಲಿರುವ ಈ ದೇಶದಲ್ಲಿ ಡಿಜಿಟಲ್ ಕ್ರಾಂತಿ ಎಂಬುದು ಇಂದಿಗೂ ಮರೀಚಿಕೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಎರಿಟ್ರಿಯಾದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. 1 ರಷ್ಟು ಜನರು ಮಾತ್ರ ಇಂಟರ್ನೆಟ್ ಬಳಸುತ್ತಿದ್ದಾರೆ. ಉಳಿದ 99 ರಷ್ಟು ಜನರಿಗೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ಯೂಟ್ಯೂಬ್‌ನಂತಹ ಸೌಲಭ್ಯಗಳ ಲಭ್ಯತೆಯೇ ಇಲ್ಲ.
ಇಂಟರ್ನೆಟ್ ಬಳಸದಿರಲು ಅಸಲಿ ಕಾರಣವೇನು?
ಅತೀ ಕಡಿಮೆ ವೇಗ: ಎರಿಟ್ರಿಯಾದಲ್ಲಿ ಇಂಟರ್ನೆಟ್ ವೇಗವು ಅತ್ಯಂತ ನಿಧಾನಗತಿಯಲ್ಲಿದೆ. ಇಲ್ಲಿನ ಕೆಲವು ಇಂಟರ್ನೆಟ್ ಕೆಫೆಗಳಲ್ಲಿ ಮಾತ್ರ ವೈ-ಫೈ ಸೌಲಭ್ಯವಿದ್ದು, ಅದರ ವೇಗವು 90ರ ದಶಕದ ಡಯಲ್-ಅಪ್ ಕನೆಕ್ಷನ್‌ಗಿಂತಲೂ ಕೆಟ್ಟದಾಗಿದೆ.
ಭಾರೀ ದುಬಾರಿ: ಇಲ್ಲಿ ಒಂದು ಗಂಟೆ ಇಂಟರ್ನೆಟ್ ಬಳಸಲು ಸುಮಾರು 100 ಎರಿಟ್ರಿಯನ್ ನಕ್ಫಾ (ಸ್ಥಳೀಯ ಹಣ) ಪಾವತಿಸಬೇಕಾಗುತ್ತದೆ. ಅಲ್ಲಿನ ಜನರ ಕಡಿಮೆ ಆದಾಯಕ್ಕೆ ಹೋಲಿಸಿದರೆ ಇದು ಭರಿಸಲಾಗದಷ್ಟು ದೊಡ್ಡ ಮೊತ್ತವಾಗಿದೆ.
ಮೂಲಸೌಕರ್ಯದ ಕೊರತೆ: ಈ ದೇಶದಲ್ಲಿ ಕೇವಲ ಇಂಟರ್ನೆಟ್ ಮಾತ್ರವಲ್ಲ, ಸಾಮಾನ್ಯ ದೇಶಗಳಲ್ಲಿ ಕಂಡುಬರುವ ಎಟಿಎಂ (ATM) ಯಂತ್ರಗಳ ಸೌಲಭ್ಯವೂ ಇಲ್ಲ. ಜನರು ಇಂದಿಗೂ ಹಣಕಾಸಿನ ವಹಿವಾಟಿಗೆ ಹಳೆಯ ಸಾಂಪ್ರದಾಯಿಕ ಪದ್ಧತಿಗಳನ್ನೇ ಅವಲಂಬಿಸಿದ್ದಾರೆ.
ಡಿಜಿಟಲ್ ಬ್ಯಾಂಕಿಂಗ್ ಮತ್ತು ನಗದು ರಹಿತ ವಹಿವಾಟು ಜಗತ್ತಿನಾದ್ಯಂತ ವೇಗವಾಗಿ ಬೆಳೆಯುತ್ತಿದ್ದರೂ, ಎರಿಟ್ರಿಯಾ ಮಾತ್ರ ಆಧುನಿಕ ಜಗತ್ತಿನಿಂದ ಸಂಪೂರ್ಣವಾಗಿ ಕಡಿತಗೊಂಡಂತೆ ಕಾಣುತ್ತಿದೆ. ಈ ದೇಶದ ಜನರು ಇಂದಿಗೂ ರೇಡಿಯೋ, ಪತ್ರಿಕೆ ಮತ್ತು ಮುಖಾಮುಖಿ ಸಂಭಾಷಣೆಯ ಮೂಲಕವೇ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

