HomeSportsWPL 2026 Final: ಮತ್ತೊಮ್ಮೆ ಡೆಲ್ಲಿ ಧೂಳೀಪಟ; ದಾಖಲೆಯ ಚೇಸ್ ಮಾಡಿ ಗೆದ್ದು ಎರಡನೇ ಬಾರಿ...

WPL 2026 Final: ಮತ್ತೊಮ್ಮೆ ಡೆಲ್ಲಿ ಧೂಳೀಪಟ; ದಾಖಲೆಯ ಚೇಸ್ ಮಾಡಿ ಗೆದ್ದು ಎರಡನೇ ಬಾರಿ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ

ವಡೋದರಾದ ಕೊತಾಂಬಿ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 204 ರನ್‌ಗಳ ಗುರಿಯನ್ನು ನೀಡಿದೆ. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್‌ನಲ್ಲಿ ಅತಿದೊಡ್ಡ ಚೇಸ್ ಮಾಡಿದ ದಾಖಲೆ ಬರೆದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ತಂಡದ ಪರ ಲಿಜೆಲ್ ಲೀ ಹಾಗೂ ಶಫಾಲಿ ವರ್ಮಾ 49 ರನ್ ಜತೆಯಾಟವಾಡಿದರು. ಲಿಜೆಲ್ ಲೀ 37 ರನ್ ಗಳಿಸಿದರೆ, ಶಫಾಲಿ ವರ್ಮಾ 20 ರನ್ ಬಾರಿಸಿದರು. ಇನ್ನುಳಿದಂತೆ ನಾಯಕಿ ಜೆಮಿಮಾ ರೊಡ್ರಿಗಸ್ 57 ರನ್ ಬಾರಿಸಿದರೆ, ಅಂತಿಮ 19ನೇ ಓವರ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಶಿನೆಲ್ ಹೆನ್ರಿ 15 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿದರು. 25 ಎಸೆತಗಳಲ್ಲಿ 44 ರನ್ ಚಚ್ಚಿದ ಲೌರಾ ವಾಲ್ವಾರ್ಟ್ ಕೊನೆಯ ಎಸೆತದಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನ್‌ಔಟ್ ಆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸಯಾಲಿ ಸಟ್ಘರೆ, ಅರುಂಧತಿ ರೆಡ್ಡಿ ಹಾಗೂ ನಡೈನ್ ಡಿ ಕ್ಲರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ ಕೇವಲ 9 ರನ್‌ಗೆ ವಿಕೆಟ್ ಒಪ್ಪಿಸಿದರು. ಹೀಗೆ ಕೇವಲ 9 ರನ್‌ಗೆ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆರ್‌ಸಿಬಿಗೆ ಎರಡನೇ ವಿಕೆಟ್‌ಗೆ ಜತೆಯಾದ ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ 165 ರನ್‌ಗಳ ಭರ್ಜರಿ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಕೊಡುಗೆ ನೀಡಿದರು. ಆರ್‌ಸಿಬಿ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆಲ್ಲಲಿದೆ ಎಂದು ಎಣಿಸಲಾಗಿತ್ತು. ಆದರೆ 17ನೇ ಓವರ್‌ನಲ್ಲಿ ವಾಲ್ 79 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಕಣಕ್ಕಿಳಿದ ರಿಚಾ ಘೋಷ್ 6 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ನೆಲಕಚ್ಚಿದ್ದ ಸ್ಮೃತಿ ಸಹ 87 ರನ್ ಗಳಿಸಿದ್ದಾಗ 19ನೇ ಓವರ್‌ನಲ್ಲಿ ಔಟ್ ಆದರು. ಕೊನೆಗೆ 8 ಎಸೆತಗಳಲ್ಲಿ 13 ರನ್ ಬೇಕಿದ್ದಾಗ ಕಣಕ್ಕಿಳಿದ ರಾಧಾ ಯಾದವ್ ಎರಡು ರನ್ ಹಾಗೂ ಸಿಂಗಲ್ ತೆಗೆದುಕೊಂಡ ಕಾರಣ ಪಂದ್ಯ ಕೊನೆಯ ಓವರ್ ತಲುಪಿತು. ಆರ್‌ಸಿಬಿಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ ಗೆಲ್ಲಲು 10 ರನ್ ಬೇಕಿದ್ದಾಗ ರಾಧಾ ಹಾಗೂ ನಡೈನ್ ಡಿ ಕ್ಲೆರ್ಕ್ ಸಿಂಗಲ್ ತೆಗೆದುಕೊಂಡರು. ಪರಿಣಾಮ 4 ಎಸೆತಕ್ಕೆ ಎಂಟು ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಸತತ ಎರಡು ಬೌಂಡರಿ ಚಚ್ಚಿದ ರಾಧಾ ಯಾದವ್ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಧಾ ಯಾದವ್ ಅಜೇಯ 12 ರನ್ ಗಳಿಸಿದರೆ, ನಡೈನ್ ಡಿ ಕ್ಲೆರ್ಕ್ ಅಜೇಯ 7 ರನ್ ಬಾರಿಸಿದರು.

ಡೆಲ್ಲಿ ಪರ ಶಿನೆಲ್ ಹೆನ್ರಿ ಎರಡು ವಿಕೆಟ್, ನಂದನಿ ಶರ್ಮಾ ಹಾಗೂ ಮಿನ್ನು ಮಣಿ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular