ಮನೆಯಲ್ಲಿ ಗ್ಯಾಸ್ ಖಾಲಿಯಾಗಿದೆ. ಸಿಲಿಂಡರ್ ಬುಕ್ ಮಾಡಿ ಡೆಲಿವರಿ ಬಾಯ್‌ಗಾಗಿ ಕಾಯುತ್ತಿದ್ದೀರಿ. ಆದರೆ, ಮೊಬೈಲ್‌ಗೆ OTP ಬರುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆಯಿಂದ ಎಷ್ಟೇ ಪ್ರಯತ್ನಿಸಿದರೂ OTP ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಲಿಂಡರ್ ಸಿಗದೆ ಪರದಾಡುವಂತಾಗುತ್ತದೆ. ಆದರೆ, ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಆಂಧ್ರಪ್ರದೇಶದ ಜನರಿಗೆ ಈಗ ಇಂತಹ ಆತಂಕ ಇರುವುದಿಲ್ಲ. ಗ್ಯಾಸ್ ಸಿಲಿಂಡರ್ ಡೆಲಿವರಿ ಪಡೆಯಲು OTP ಕಡ್ಡಾಯವಲ್ಲ ಎಂದು ಸರ್ಕಾರ ತಾತ್ಕಾಲಿಕ ವಿನಾಯಿತಿ ನೀಡಿದೆ.
ಚಂಡಮಾರುತದ ಪರಿಣಾಮವಾಗಿ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮೊಬೈಲ್ ಟವರ್‌ಗಳಲ್ಲಿಯೂ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಇದರಿಂದ ಮೊಬೈಲ್ ಸಿಗ್ನಲ್ ಸರಿಯಾಗಿ ಸಿಗುತ್ತಿಲ್ಲ. ಪರಿಣಾಮವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಗ್ರಾಹಕರಿಗೆ OTP ತಲುಪುತ್ತಿಲ್ಲ. OTP ಇಲ್ಲದ ಕಾರಣ ಸಿಲಿಂಡರ್ ಡೆಲಿವರಿಯೂ ವಿಳಂಬವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜನರು ಈಗಾಗಲೇ ಮಳೆ ಮತ್ತು ಚಂಡಮಾರುತದ ಸಂಕಷ್ಟ ಎದುರಿಸುತ್ತಿರುವಾಗ ಅಡುಗೆ ಅನಿಲಕ್ಕಾಗಿ ಮತ್ತಷ್ಟು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಇನ್ಮುಂದೆ OTP ಇಲ್ಲದಿದ್ದರೂ ಸಿಗಲಿದೆ ಗ್ಯಾಸ್ ಸಿಲಿಂಡರ್!
ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಬಳಿಕ ಮನೆಗೆ ಡೆಲಿವರಿ ಮಾಡುವ ಸಂದರ್ಭದಲ್ಲಿ ಗ್ರಾಹಕರ ಮೊಬೈಲ್‌ಗೆ OTP ಬರುತ್ತದೆ. ಈ ಸಂಖ್ಯೆಯನ್ನು ಡೆಲಿವರಿ ಸಿಬ್ಬಂದಿಗೆ ತಿಳಿಸಿದ ನಂತರ ಅವರು ತಮ್ಮ ಆ್ಯಪ್‌ನಲ್ಲಿ ಪರಿಶೀಲನೆ ನಡೆಸಿ ಸಿಲಿಂಡರ್ ನೀಡುತ್ತಾರೆ.ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವಾಗುವುದನ್ನು ತಡೆಯಲು ಮತ್ತು ನಿಜವಾದ ಗ್ರಾಹಕರಿಗೆ ಮಾತ್ರ ಗ್ಯಾಸ್ ತಲುಪಿಸುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿತ್ತು.
ಆದರೆ, ಚಂಡಮಾರುತದ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ OTP ಪಡೆಯುವುದೇ ಕಷ್ಟವಾಗಿದೆ. ಹೀಗಾಗಿ ಆಂಧ್ರಪ್ರದೇಶ ಸರ್ಕಾರ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಈ ನಿಯಮಕ್ಕೆ ತಾತ್ಕಾಲಿಕ ವಿನಾಯಿತಿ ನೀಡಿದೆ. ಅಂದರೆ, OTP ಬರದಿದ್ದರೂ ಗ್ರಾಹಕರು ಗ್ಯಾಸ್ ಸಿಲಿಂಡರ್ ಪಡೆಯಬಹುದು.
ಆಂಧ್ರಪ್ರದೇಶದ ಚಂಡಮಾರುತ ಪೀಡಿತ ಏಲೂರು, ಕೃಷ್ಣಾ, ಶ್ರೀಕಾಕುಳಂ, ವಿಜಯನಗರಂ, ಪಾರ್ವತೀಪುರಂ, ಅಲ್ಲೂರಿ ಸೀತಾರಾಮರಾಜು, ಪೋಲವರಂ, ವಿಶಾಖಪಟ್ಟಣಂ, ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ, ಕಾಕಿನಾಡ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಹಾಗೂ ಅನಕಾಪಲ್ಲಿ ಸೇರಿದಂತೆ ಒಟ್ಟು 13 ಜಿಲ್ಲೆಗಳ ಜನರಿಗೆ ಮಾತ್ರ ಈ ವಿನಾಯಿತಿ ಸೌಲಭ್ಯ ಅನ್ವಯವಾಗಲಿದೆ.
ಈ ಜಿಲ್ಲೆಗಳ ಗ್ರಾಹಕರು OTP ಸಮಸ್ಯೆಯಿಂದಾಗಿ ಗ್ಯಾಸ್ ಸಿಲಿಂಡರ್ ಸಿಗದೆ ಪರದಾಡುವ ಅಗತ್ಯವಿಲ್ಲ. ಅಲ್ಲದೆ, ನಗದು ಪಾವತಿಸಿ ನೇರವಾಗಿ ಸಿಲಿಂಡರ್ ಪಡೆಯಲು ಕೂಡ ಸರ್ಕಾರ ಅನುಮತಿ ನೀಡಿದೆ.
ಉಳಿದ ಜಿಲ್ಲೆಗಳ ಗ್ರಾಹಕರಿಗೆ ಹಳೆಯ ನಿಯಮವೇ ಅನ್ವಯ!
ಈ ಸೌಲಭ್ಯ ಆಂಧ್ರಪ್ರದೇಶದ ಮೇಲಿನ 13 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಉಳಿದ ಜಿಲ್ಲೆಗಳಲ್ಲಿ ಗ್ಯಾಸ್ ಸಿಲಿಂಡರ್ ಡೆಲಿವರಿಗೆ ಹಿಂದಿನಂತೆಯೇ OTP ದೃಢೀಕರಣ ಕಡ್ಡಾಯವಾಗಿರುತ್ತದೆ.ಸರ್ಕಾರದ ಈ ನಿರ್ಧಾರದಿಂದ ಚಂಡಮಾರುತದ ಸಂಕಷ್ಟದ ನಡುವೆ ಅಡುಗೆ ಅನಿಲಕ್ಕಾಗಿ ಕಾಯುತ್ತಿದ್ದ ಸಾವಿರಾರು ಕುಟುಂಬಗಳಿಗೆ ತಾತ್ಕಾಲಿಕ ನೆಮ್ಮದಿ ಸಿಗುವ ನಿರೀಕ್ಷೆಯಿದೆ.
ಗಮನಿಸಿ: ಈ ವಿನಾಯಿತಿ ಆಂಧ್ರಪ್ರದೇಶದ 13 ಜಿಲ್ಲೆಗಳಿಗೆ ಮಾತ್ರ ಅನ್ವಯಿಸುತ್ತದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ.

