ಬೆಂಗಳೂರು: ಮೊಮ್ಮಗಳನ್ನು ಅಪಹರಿಸುತ್ತಿದ್ದ ಆರೋಪಿಗಳನ್ನು ತಡೆಯಲು ಬಂದ ಮಹಿಳೆಗೆ ಕಿರಾಅತಕರು ಚಾಕು ಇರಿದಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಾಗೇಶ್ವರಿ (55) ಮೃತ ಮಹಿಳೆ. ಚಾಕು ಇರಿತಕ್ಕೊಳಗಾಗಿದ್ದ ಮಹಿಳೆ ಮಾಗೇಶ್ವರಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಮಾರ್ಚ್ 25ರಂದು ಆಡುಗೋಡಿಯ ಮನೆಯಲ್ಲಿ ಮಾಗೇಶ್ವರಿ ಅವರಿಗೆ ಚಾಕು ಇರಿಯಲಾಗಿತ್ತು. ಮಾಗೇಶ್ವರಿಯ ಸಹೋದರ ಸಂಬಂಧಿ ಕಿರಣ್ ಮತ್ತು ಅವರ ಕಡೆಯವರು ಚಾಕುವಿನಿಂದ ಹಲ್ಲೆಗೈದು ಪರಾರಿಯಾಗಿದ್ದರು. ಮಾಗೇಶ್ವರಿಯ ಮೊಮ್ಮಗಳನ್ನು ಅಪಹರಿಸಲು ಬಂದಿದ್ದ ವೇಳೆ ಮಾಗೇಶ್ವರಿ ಅವರನ್ನು ತಡೆಯಲು ಯತ್ನಿಸಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.
ಮಾಗೇಶ್ವರಿಯ ಅಣ್ಣನ ಮಗನಾಗಿದ್ದ ಕಿರಣ್ಗೆ ಮದುವೆಯಾಗಿದ್ದರೂ ಸಹ ಮಾಗೇಶ್ವರಿ ಮೊಮ್ಮಗಳ ಮೇಲೆ ಕಣ್ಣು ಹಾಕಿದ್ದ. ಕೆಲ ದಿನಗಳ ಹಿಂದೆ ಕಿರಣ್ನನ್ನು ತೊರೆದು ಬಂದು ಅಜ್ಜಿ ಮಾಗೇಶ್ವರಿಯೊಂದಿಗೆ ಆಡುಗೋಡಿಯಲ್ಲಿ ವಾಸವಿದ್ದಳು. ಆದರೆ ಮಾರ್ಚ್ 25ರಂದು ಯುವತಿಯನ್ನು ಹುಡುಕಿಕೊಂಡು ಬಂದಿದ್ದ ಕಿರಣ್ ಮತ್ತವನ ಕಡೆಯವರು, ಬಲವಂತವಾಗಿ ಆಕೆಯನ್ನು ಅಪಹರಿಸಿಕೊಂಡು ಹೋಗಲು ಯತ್ನಿಸಿದ್ದರು. ಆ ಸಂದರ್ಭದಲ್ಲಿ ತಡೆಯಲು ಬಂದ ಮಾಗೇಶ್ವರಿಗೆ ಚಾಕುವಿನಿಂದ ಹಲ್ಲೆ ಮಾಡಿ, ಇರಿದು ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ಕಿರಣ್, ಮಣಿವಣ್ಣನ್, ಮಣಿರಾಜ್ ಹಾಗೂ ಅಭಿಷೇಕ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.

