ಇಂದು ( ಏಪ್ರಿಲ್ 12 ) ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್ ಹಂತದ 20ನೇ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿನ ತನ್ನ ಮೊದಲ ಎರಡು ಪಂದ್ಯಗಳನ್ನು ಗೆದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಟ್ರ್ಯಾಕ್‌ಗೆ ಮರಳುವ ಯೋಜನೆಯಲ್ಲಿದೆ.
ಅತ್ತ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯ ಗೆದ್ದ ಮುಂಬೈ ಇಂಡಿಯನ್ಸ್ ನಂತರದ ಎರಡು ಪಂದ್ಯಗಳಲ್ಲಿ ಸೋಲುಂಡು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯ ಮುಂಬೈ ಇಂಡಿಯನ್ಸ್‌ಗೂ ಸಹ ಮುಖ್ಯದ್ದಾಗಿದೆ.
ಈ ಕುರಿತು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಾತನಾಡಿದ್ದು ಒಂದು ತಂಡ ಮುಂದಿದೆ ಎಂದು ಹೇಳಿದ್ದಾರೆ. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು ಸದ್ಯ ಪ್ರವಾಸ ಮಾಡಿ ಆಡುತ್ತಿದೆ. ತವರಿನಲ್ಲಿ ಮೊದಲೆರಡು ಪಂದ್ಯಗಳನ್ನು ಆಡಿದಾಗ ಸುಲಭವಾಗಿ ಜಯ ಸಾಧಿಸಿದರು. ಆದರೆ ಪ್ರಯಾಣ ಮಾಡಿ ಗುವಾಹಟಿಗೆ ಹೋದಾಗ ಸೋತರು. ಹೀಗಾಗಿ ಆರ್‌ಸಿಬಿ ಕ್ಯಾಂಪ್‌ನಲ್ಲಿ ಪ್ರಶ್ನೆಗಳು ಎದ್ದಿರುತ್ತವೆ’ ಎಂದು ಇರ್ಫಾನ್ ಪಠಾಣ್ ತಿಳಿಸಿದರು.
ಅಲ್ಲದೇ ‘ನನ್ನ ಪ್ರಕಾರ ಪಂದ್ಯದಲ್ಲಿ ಯಾವ ತಂಡದ ಬೌಲರ್‌ಗಳು ಡೆತ್ ಓವರ್‌ಗಳಲ್ಲಿ ಚೆನ್ನಾಗಿ ಪ್ರದರ್ಶನ ನೀಡುತ್ತಾರೋ ಅದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ. ಅದೇ ರೀತಿ ಟಾಸ್ ಸಹ ಪಂದ್ಯದ ಬಹುಮುಖ್ಯ ಅಂಶ. ಆರ್‌ಸಿಬಿಗೆ ಫಾರ್ಮ್ ಇದೆ. ಆದರೆ ಆಟಗಾರರ ನಡುವೆ ಹೋಲಿಕೆ ಮಾಡಿ ನೋಡಿದರೆ ಮುಂಬೈ ಇಂಡಿಯನ್ಸ್ ಮುಂದಿದೆ’ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

