ಮೊನ್ನೆ ( ಏಪ್ರಿಲ್ 10 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಘಾತ ಅನುಭವಿಸಿ ನಾಯಕ ರಜತ್ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್‌ಗಳ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅರ್ಧಶತಕಗಳ ನೆರವಿನಿಂದ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.
ಈ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಬಿಂದರ್ ಆಟಗಾರರ ಮತ್ತು ಪಂದ್ಯ ಅಧಿಕಾರಿಗಳ ಪ್ರದೇಶದಲ್ಲಿ ಮೊಬೈಲ್ ಬಳಸಿರುವುದು ಕಂಡುಬಂದಿದೆ.
ರಾಜಸ್ಥಾನ್ ರಾಯಲ್ಸ್ ಚೇಸ್ ಮಾಡುವಾಗ 11ನೇ ಓವರ್ ವೇಳೆ ರೋಮಿ ಬಿಂದರ್ ಡಗ್‌ಔಟ್‌ನಲ್ಲಿ ವೈಭವ್ ಸೂರ್ಯವಂಶಿ ಪಕ್ಕ ಕುಳಿತು ಮೊಬೈಲ್ ಬಳಸಿದ್ದಾರೆ. ಪಕ್ಕದಲ್ಲಿ ಕುಳಿತಿದ್ದ ವೈಭವ್ ಸೂರ್ಯವಂಶಿ ಮೊಬೈಲ್‌ನತ್ತ ಇಣುಕಿ ನೋಡಿದ್ದಾರೆ.
ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಡಗ್‌ಔಟ್‌ಗೆ ಮೊಬೈಲ್ ತರಲು ಅನುಮತಿ ಕೊಟ್ಟವರಾರು, ಇದು ನಿಯಮ ಉಲ್ಲಂಘನೆಯಾಗಿದೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ನಿಯಮದ ಪ್ರಕಾರ ಡ್ರೆಸಿಂಗ್ ರೂಮ್‌ನಲ್ಲಿ ಮೊಬೈಲ್ ಬಳಸಲು ಅನುಮತಿ ಇದೆ, ಆದರೆ ಡಗ್‌ಔಟ್‌ನಲ್ಲಿ ಬಳಸಲು ಅನುಮತಿಯಿಲ್ಲ.

