ನವದೆಹಲಿ : ಸಾರ್ವಜನಿಕ ಸಭೆಯ ವೇಳೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಮೇಲೆ ಅಪರಿಚಿತ ಮಹಿಳೆಯೊಬ್ಬರು ನೀಲಿ ಮಸಿ ಎರಚಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಳಿಕ ದಿಪ್ಕೆ ಅವರು ಅದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು “Blue is my colour… Jai Bhim!” (ನೀಲಿ ನನ್ನ ಬಣ್ಣ… ಜೈ ಭೀಮ್!) ಎಂದು ಬರೆದುಕೊಂಡಿದ್ದಾರೆ.
ವಿಡಿಯೊದಲ್ಲಿ ದಿಪ್ಕೆ ಅವರು ಮೈಕ್ರೋಫೋನ್ ಹಿಡಿದು ಜನರನ್ನುದ್ದೇಶಿಸಿ ಮಾತನಾಡುತ್ತಿರುವಾಗ, ಜನಸಮೂಹದ ಮಧ್ಯೆ ಇದ್ದ ಮಹಿಳೆಯೊಬ್ಬರು ಏಕಾಏಕಿ ನೀಲಿ ಮಸಿಯನ್ನು ಎರಚುತ್ತಿರುವುದು ಕಾಣಿಸುತ್ತದೆ. ಮಸಿ ದಿಪ್ಕೆ ಸೇರಿದಂತೆ ಅಲ್ಲಿದ್ದ ಕೆಲವರ ಮೇಲೂ ಬಿದ್ದಿದ್ದು, ಬಳಿಕ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬೆಂಬಲಿಗರು ಹಾಗೂ ಅಲ್ಲಿದ್ದವರು ಪರಸ್ಪರ ತಳ್ಳಾಟ-ನೂಕಾಟ ನಡೆಸಿದ ದೃಶ್ಯವೂ ವಿಡಿಯೊದಲ್ಲಿ ಸೆರೆಯಾಗಿದೆ.
ದಿಪ್ಕೆ ಅವರು ಘಟನೆ ಬಳಿಕ ಹಂಚಿಕೊಂಡ ಪೋಸ್ಟ್ನಲ್ಲಿ “ನೀಲಿ ನನ್ನ ಬಣ್ಣ… ಜೈ ಭೀಮ್!” ಎಂದು ಉಲ್ಲೇಖಿಸಿದ್ದಾರೆ. “ಜೈ ಭೀಮ್” ಎಂಬ ಘೋಷಣೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಹಾಗೂ ಅಂಬೇಡ್ಕರವಾದಿ-ಬಹುಜನ ಚಳವಳಿಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ್ದು, ನೀಲಿ ಬಣ್ಣ ಆ ಚಳವಳಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹಲವರು ಇದರ ಹಿಂದಿನ ಉದ್ದೇಶ ಹಾಗೂ ರಾಜಕೀಯ ಆಯಾಮಗಳ ಬಗ್ಗೆ ಊಹಾಪೋಹಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ಘಟನೆಗೆ ಕಾರಣವೇನು, ಮಸಿ ಎರಚಿದ ಮಹಿಳೆ ಯಾರು ಎಂಬುದು ಸೇರಿದಂತೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ಹೇಳಿಕೆಗಳಿಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

