ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ಜನಿಸಿದ ಸಾಮಾನ್ಯ ಹುಡುಗಿಯೊಬ್ಬಳು ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಚಿತ್ರರಂಗಕ್ಕೆ ಪ್ರವೇಶಿಸುವ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ, ಇಂದು ಭಾರತ ಮತ್ತು ಅಮೆರಿಕದ ಮನರಂಜನಾ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಪ್ರಿಯಾಂಕಾ ಚೋಪ್ರಾ ಒಬ್ಬರಾಗಿದ್ದಾರೆ. ಖ್ಯಾತ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾಗಿರುವ ಪ್ರಿಯಾಂಕಾ, ಇಂದು ಕೋಟ್ಯಂತರ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದಾರೆ.
ಕೇವಲ ಸಿನಿಮಾಗಳು ಮಾತ್ರವಲ್ಲದೆ ಯಶಸ್ವಿ ಉದ್ಯಮಗಳು, ರಿಯಲ್ ಎಸ್ಟೇಟ್ ಹೂಡಿಕೆ ಹಾಗೂ ವಿಶ್ವದ ಪ್ರತಿಷ್ಠಿತ ಬ್ರ್ಯಾಂಡ್‌ಗಳ ರಾಯಭಾರಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಅವರ ಒಟ್ಟು ಆಸ್ತಿ ಮೌಲ್ಯದ ಒಂದು ನೋಟ ಇಲ್ಲಿದೆ.
650 ಕೋಟಿ ರೂಪಾಯಿಗಳ ಒಡೆಯತಿ
ಜಿಕ್ಯೂ ಇಂಡಿಯಾ ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 650 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳು, ಸ್ವಂತ ನಿರ್ಮಾಣ ಸಂಸ್ಥೆ, ವಿವಿಧ ಉದ್ಯಮಗಳು ಹಾಗೂ ಜಾಗತಿಕ ಬ್ರ್ಯಾಂಡ್‌ಗಳ ಜಾಹೀರಾತುಗಳ ಮೂಲಕ ಅವರು ಈ ಬೃಹತ್ ಆಸ್ತಿಯನ್ನು ಗಳಿಸಿದ್ದಾರೆ. ಭಾರತ ಮತ್ತು ಅಮೆರಿಕದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಇವರ ಬಳಿ ಐಷಾರಾಮಿ ಕಾರುಗಳು ಹಾಗೂ ಅಪರೂಪದ ಆಭರಣಗಳ ಸಂಗ್ರಹವೇ ಇದೆ.
ಸಿನಿಮಾ ಜಗತ್ತಿನ ಪಯಣ
ವರ್ಷ 2000 ರಲ್ಲಿ ಲಂಡನ್‌ನಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕಿರೀಟ ಮುಡಿಯುವ ಮೂಲಕ ಪ್ರಿಯಾಂಕಾ ಜಾಗತಿಕವಾಗಿ ಗಮನ ಸೆಳೆದರು. ಆಗ ಅವರಿಗೆ ಕೇವಲ 18 ವರ್ಷ ವಯಸ್ಸು. ನಂತರ 2002 ರಲ್ಲಿ ತಮಿಳಿನ ‘ತಮಿಳನ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಅವರು, ‘ದಿ ಹೀರೋ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಫ್ಯಾಷನ್, ಬರ್ಫಿ, ಬಾಜೀರಾವ್ ಮಸ್ತಾನಿ, ಮೇರಿ ಕೋಮ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಇವರು, ಅಮೆರಿಕದ ‘ಕ್ವಾಂಟಿಕೋ’ ವೆಬ್ ಸರಣಿಯ ಮೂಲಕ ಹಾಲಿವುಡ್‌ನಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡರು. ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್ ಮತ್ತು ಬೇವಾಚ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಚಿತ್ರಗಳಲ್ಲಿ ನಟಿಸಿರುವ ಇವರು, ಸದ್ಯ ಎಸ್‌ಎಸ್ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ಭಾರತೀಯ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ರಿಯಲ್ ಎಸ್ಟೇಟ್ ಮತ್ತು ಉದ್ಯಮಗಳು
ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ದಂಪತಿ 2019 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬರೋಬ್ಬರಿ 20 ಮಿಲಿಯನ್ ಡಾಲರ್ ಮೌಲ್ಯದ ಐಷಾರಾಮಿ ಬಂಗಲೆಯನ್ನು ಖರೀದಿಸಿದರು. ಇದರೊಂದಿಗೆ ಮುಂಬೈ ಸೇರಿದಂತೆ ಭಾರತದ ವಿವಿಧೆಡೆ ಹಲವು ಆಸ್ತಿಗಳನ್ನು ಹೊಂದಿದ್ದಾರೆ. 2016 ರಲ್ಲಿ ‘ಪರ್ಪಲ್ ಪೆಬ್ಬಲ್ ಪಿಕ್ಚರ್ಸ್’ ಎಂಬ ಪ್ರಾದೇಶಿಕ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. 2021 ರಲ್ಲಿ ಆರಂಭಿಸಿದ ‘ಅನೋಮಲಿ’ ಎಂಬ ಹೇರ್ ಕೇರ್ ಬ್ರ್ಯಾಂಡ್ ದೊಡ್ಡ ಯಶಸ್ಸು ಕಂಡು ನಂತರ ಭಾರತೀಯ ಸಂಸ್ಥೆಯೊಂದರ ಪಾಲಾಯಿತು. ಇದಲ್ಲದೆ ‘ಬಂಬಲ್’ ಡೇಟಿಂಗ್ ಆಪ್‌ನಲ್ಲಿ ಹೂಡಿಕೆ ಮಾಡಿರುವ ಇವರು, ನ್ಯೂಯಾರ್ಕ್‌ನಲ್ಲಿ ‘ಸೋನಾ’ ಎಂಬ ರೆಸ್ಟೋರೆಂಟ್ ಕೂಡ ಆರಂಭಿಸಿದ್ದರು.
ಐಷಾರಾಮಿ ಬ್ರ್ಯಾಂಡ್ ಮತ್ತು ಕಾರುಗಳ ಸಂಗ್ರಹ
ವಿಶ್ವದ ಅತ್ಯಂತ ಪ್ರತಿಷ್ಠಿತ ಜ್ಯುವೆಲ್ಲರಿ ಬ್ರ್ಯಾಂಡ್ ಆದ ‘ಬಲ್ಗರಿ’ ಮತ್ತು ಪ್ರಸಿದ್ಧ ವಾಚ್ ಬ್ರ್ಯಾಂಡ್ ‘ರೋಲೆಕ್ಸ್’ ಸಂಸ್ಥೆಯ ಜಾಗತಿಕ ರಾಯಭಾರಿಯಾಗಿ ಪ್ರಿಯಾಂಕಾ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಇಂಟರ್ನ್ಯಾಷನಲ್ ಕಾರ್ ಬ್ರ್ಯಾಂಡ್ ಬೆಂಟ್ಲಿ ಜೊತೆಗೂ ಗುರುತಿಸಿಕೊಂಡಿದ್ದಾರೆ. ಇವರ ಗ್ಯಾರೇಜ್‌ನಲ್ಲಿ ನಿಕ್ ಜೋನಾಸ್ ಉಡುಗೊರೆಯಾಗಿ ನೀಡಿದ ಮರ್ಸಿಡಿಸ್ ಮೇಬ್ಯಾಕ್, ರೋಲ್ಸ್ ರಾಯ್ಸ್ ಘೋಸ್ಟ್ ಮತ್ತು ವಿಂಟೇಜ್ ಫೋರ್ಡ್ ಥಂಡರ್ ಬರ್ಡ್ ನಂತಹ ದುಬಾರಿ ಕಾರುಗಳಿವೆ. ಸಾರ್ವಜನಿಕ ಸಮಾರಂಭಗಳಲ್ಲಿ ಇವರು ಬಳಸುವ ಡಿಯೋರ್, ಬಲ್ಗರಿ ಹಾಗೂ ಹರ್ಮಿಸ್ ಸಂಸ್ಥೆಯ ಬ್ಯಾಗ್‌ಗಳು ಫ್ಯಾಷನ್ ಜಗತ್ತಿನಲ್ಲಿ ಸದಾ ಸುದ್ದಿಯಲ್ಲಿರುತ್ತವೆ.

