ಲಂಡನ್: ಜಗತ್ತಿನ ನಂಬರ್ 1 ಶ್ರೀಮಂತ ಎಂದರೆ ತಕ್ಷಣ ನೆನಪಾಗುವುದು ಎಲಾನ್ ಮಸ್ಕ್. ಆದರೆ ಬ್ರಿಟನ್‌ನ ಯುವತಿಯೊಬ್ಬಳು ಒಂದು ಕಪ್ ಕಾಫಿ ಕುಡಿಯುವಷ್ಟರಲ್ಲಿ ಮಸ್ಕ್ ಅವರನ್ನೂ ಮೀರಿಸುವ ಸಂಪತ್ತಿನ ಒಡತಿಯಾಗಿ ಬಿಟ್ಟಳು ಕೇಳಲು ಇದು ಯಾವುದೋ ಸಿನಿಮಾ ಕಥೆಯಂತೆ ಕಂಡರೂ, ಅಕ್ಷರಶಃ ನಡೆದ ರೋಚಕ ಘಟನೆ ಇಲ್ಲಿದೆ.
ಘಟನೆ ಹಿನ್ನೆಲೆ: 10 ಪೌಂಡ್ ವೋಚರ್ ತಂದ ಅದೃಷ್ಟ?
ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್ ಮೂಲದ ಸೋಫಿ ಡೌನಿಂಗ್ ಎಂಬ 29 ವರ್ಷದ ಯುವತಿಗೆ ಕ್ರಿಸ್‌ಮಸ್ ಉಡುಗೊರೆಯಾಗಿ £10 (ಸುಮಾರು 1,000 ರೂ.) ಮೌಲ್ಯದ ಕಾಫಿ ಗಿಫ್ಟ್ ಕಾರ್ಡ್ ಸಿಕ್ಕಿತ್ತು. ಕಳೆದ ವಾರ ಅವರು ಅಲ್ಲಿನ 200 ಡಿಗ್ರೀಸ್ ಕಾಫಿ ಅಂಗಡಿಯಲ್ಲಿ ಒಂದು ಕಪ್ ಮಚ್ಚಾ ಲ್ಯಾಟೆ ಖರೀದಿಸಿ, ಪಾವತಿಸಲು ಈ ಕಾರ್ಡ್ ಬಳಸಿದರು.
ಪರದೆಯ ಮೇಲೆ ಕಂಡ ಆ ಸಂಖ್ಯೆ ನೋಡಿ ಎಲ್ಲರೂ ದಂಗು
ಕಾಫಿ ಬಿಲ್ ಕಡಿತವಾದ ನಂತರ ಉಳಿದ ಮೊತ್ತವನ್ನು ನೋಡಿದ ಸೋಫಿ ಮತ್ತು ಅಲ್ಲಿನ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಕಂಪ್ಯೂಟರ್ ಪರದೆಯ ಮೇಲೆ ಬ್ಯಾಲೆನ್ಸ್ ಆಗಿ ಕಂಡಿದ್ದು ಅಂತಿಂತಾ ಮೊತ್ತವಲ್ಲ; ಬರೋಬ್ಬರಿ £63 ಕ್ವಾಡ್ರಿಲಿಯನ್ (63,00,00,00,00,00,00,000 ಪೌಂಡ್ಸ್)
ಮಸ್ಕ್‌ಗಿಂತ ಶ್ರೀಮಂತೆ: ಈ ಮೊತ್ತವು ಟೆಸ್ಲಾ ಒಡೆಯ ಎಲಾನ್ ಮಸ್ಕ್ ಅವರ ಒಟ್ಟು ಆಸ್ತಿಗಿಂತ ಸುಮಾರು 1 ಲಕ್ಷ ಪಟ್ಟು ಹೆಚ್ಚು.ವಿಶ್ವದ ಆರ್ಥಿಕತೆಗಿಂತ ದೊಡ್ಡದು: ಈ ಹಣದ ಮೌಲ್ಯವು ಜಗತ್ತಿನ ಎಲ್ಲಾ ದೇಶಗಳ ಒಟ್ಟಾರೆ ಜಿಡಿಪಿ (GDP) ಗಿಂತಲೂ ನೂರಾರು ಪಟ್ಟು ಅಧಿಕವಾಗಿತ್ತು.
ಹಾಗಾದರೆ ಸೋಫಿ ನಿಜಕ್ಕೂ ಕ್ವಾಡ್ರಿಲಿಯನೇರ್ ಆದರೇ?
ಈ ಅತಿಮಾನುಷ ಸಂಪತ್ತಿನ ಹಿಂದಿನ ಅಸಲಿ ಸತ್ಯ ಏನೆಂದರೆ ಅದು ಕೇವಲ ಒಂದು ಡಿಜಿಟಲ್ ತಾಂತ್ರಿಕ ದೋಷ (Software Glitch). ಸ್ಕ್ಯಾನಿಂಗ್ ಮಾಡುವಾಗ ಬಾರ್‌ಕೋಡ್ ಸಂಖ್ಯೆಯೇ ಬ್ಯಾಲೆನ್ಸ್ ರೂಪದಲ್ಲಿ ಕಾಣಿಸಿಕೊಂಡಿತ್ತು.
ಈ ಹಣವನ್ನು ನಗದು ಮಾಡಿಕೊಳ್ಳಲು ಅಥವಾ ಬೇರೆ ಕಡೆ ಬಳಸಲು ಸಾಧ್ಯವಿಲ್ಲ.
ಇದನ್ನು ಕೇವಲ ಅದೇ ಅಂಗಡಿಯಲ್ಲಿ ಕಾಫಿ ಮತ್ತು ತಿಂಡಿ ಖರೀದಿಸಲು ಮಾತ್ರ ಬಳಸಬಹುದಾಗಿತ್ತು
ನಾನು ಕೆಲವೇ ನಿಮಿಷಗಳ ಕಾಲ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡೆ. ಇದು ನಮಗೆ ದೊಡ್ಡ ನಗು ತರಿಸಿದ ಘಟನೆ ಎಂದು ಸೋಫಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

