ಬೆಂಗಳೂರು: ಫೆಬ್ರವರಿ 28 ರಂದು ಇರಾನ್ ಸಂಘರ್ಷ ಆರಂಭವಾದಾಗಿನಿಂದ ಇಡೀ ಜಗತ್ತು ಆತಂಕದಲ್ಲಿದೆ. ಗಲ್ಫ್ ರಾಷ್ಟ್ರಗಳ ಆರ್ಥಿಕತೆ ಹದಗೆಟ್ಟಿದೆ, ಅಮೆರಿಕ ಮತ್ತು ಇಸ್ರೇಲ್ನಂತಹ ದೇಶಗಳು ಭಾರಿ ಹಿನ್ನಡೆ ಅನುಭವಿಸಿವೆ. ಆದರೆ, ಇಡೀ ಜಗತ್ತು ಸಂಕಷ್ಟದಲ್ಲಿರುವಾಗಲೇ ಕೇವಲ 28 ದಿನಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಲಾಭ ಗಳಿಸಿದ ಮೂವರು ವ್ಯಕ್ತಿಗಳು ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ.ಈ ಮೂವರಲ್ಲಿ ಇಬ್ಬರು ರಷ್ಯಾದವರಾದರೆ, ಒಬ್ಬರು ಅಮೆರಿಕದವರು. ಇವರ ಕಂಪನಿಗಳ ವೇಗ ಎಷ್ಟಿದೆಯೆಂದರೆ, ನೋಟು ಮುದ್ರಿಸುವ ಯಂತ್ರವೂ ಇಷ್ಟೊಂದು ವೇಗವಾಗಿ ಹಣ ಮುದ್ರಿಸಲು ಸಾಧ್ಯವಿಲ್ಲ ಎಂಬ ಚರ್ಚೆ ಶುರುವಾಗಿದೆ.ಇವರು ಈ ಜಾಗತಿಕ ಅಸ್ಥಿರತೆಯನ್ನು ತಮ್ಮ ಪಾಲಿನ ಆರ್ಥಿಕ ಅದೃಷ್ಟವನ್ನಾಗಿ ಬದಲಿಸಿಕೊಂಡಿದ್ದಾರೆ.
ಯಾರು ಈ ಮೂವರು ಕುಬೇರರು?
ಈ ಆರ್ಥಿಕ ಏಳಿಗೆಯ ಕೇಂದ್ರಬಿಂದುಗಳೆಂದರೆ ವಾಗಿತ್ ಅಲೆಕ್ಪೆರೋವ್, ಇಗೋರ್ ಸೆಚಿನ್ ಮತ್ತು ಜೇಮ್ಸ್ ಡಿ. ಟೈಕ್ಲೆಟ್.
ವಾಗಿತ್ ಅಲೆಕ್ಪೆರೋವ್: ತೈಲ ಬಿಕ್ಕಟ್ಟಿನ ಲಾಭದಾಯಕ ಪಯಣ
ರಷ್ಯಾದ ಅತಿದೊಡ್ಡ ಖಾಸಗಿ ತೈಲ ಕಂಪನಿ ಲುಕೋಯಿಲ್ (Lukoil) ಮಾಲೀಕ ವಾಗಿತ್ ಅಲೆಕ್ಪೆರೋವ್ ಇಂದು ರಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ.ಹಿನ್ನೆಲೆ: ಸಾಮಾನ್ಯ ಆಯಿಲ್ ರಿಗ್ ಕೆಲಸಗಾರನಾಗಿ ವೃತ್ತಿ ಆರಂಭಿಸಿದ ಇವರು, ಇಂದು 2.4 ಲಕ್ಷ ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ.ಇರಾನ್ ಸಂಘರ್ಷದಿಂದ ತೈಲ ಪೂರೈಕೆ ಸ್ಥಗಿತಗೊಂಡಾಗ, ಲುಕೋಯಿಲ್ ಕಂಪನಿ ಆ ಕೊರತೆಯನ್ನು ನೀಗಿಸಿತು. ತೈಲ ಬೆಲೆಗಳು ದುಪ್ಪಟ್ಟಾಗುತ್ತಿದ್ದಂತೆ ಅಲೆಕ್ಪೆರೋವ್ ಅವರ ಸಂಪತ್ತು ರಾಕೆಟ್ ವೇಗದಲ್ಲಿ ಏರಿತು.
ಇಗೋರ್ ಸೆಚಿನ್: ರಷ್ಯಾದ ಇಂಧನ ಕಿಂಗ್ಮೇಕರ್
ರಷ್ಯಾದ ಸರ್ಕಾರಿ ಸ್ವಾಮ್ಯದ ರೋಸ್ನೆಫ್ಟ್ (Rosneft) ಸಿಇಒ ಆಗಿರುವ ಸೆಚಿನ್, ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಪ್ತರು.ಅನುವಾದಕನಾಗಿ ವೃತ್ತಿ ಆರಂಭಿಸಿದ ಇವರು ಇಂದು ಜಾಗತಿಕ ತೈಲ ಮಾರುಕಟ್ಟೆಯನ್ನು ನಿಯಂತ್ರಿಸುವ ಶಕ್ತಿಯಾಗಿದ್ದಾರೆ.ಇರಾನ್ ಮೇಲಿನ ನಿರ್ಬಂಧಗಳಿಂದಾಗಿ ಜಗತ್ತು ರಷ್ಯಾದ ತೈಲದ ಮೇಲೆ ಅವಲಂಬಿತವಾಯಿತು. ಇದರ ಲಾಭದಿಂದ ಸೆಚಿನ್ ಅವರ ಆದಾಯ ಮತ್ತು ಬೋನಸ್ಗಳು ಗಗನಕ್ಕೇರಿವೆ. ಇವರನ್ನು ದ ಹೈಯೆಸ್ಟ್ ಪೇಯ್ಡ್ ಎಕ್ಸಿಕ್ಯೂಟಿವ್ ಎಂದೇ ಕರೆಯಲಾಗುತ್ತದೆ
ಜೇಮ್ಸ್ ಡಿ. ಟೈಕ್ಲೆಟ್: ಯುದ್ಧದಿಂದ ಲಾಭದತ್ತ ಲಾಕ್ಹೀಡ್ ಮಾರ್ಟಿನ್
ಅಮೆರಿಕದ ರಕ್ಷಣಾ ಉದ್ಯಮದ ದೈತ್ಯ ಲಾಕ್ಹೀಡ್ ಮಾರ್ಟಿನ್ (Lockheed Martin) ಸಿಇಒ ಜೇಮ್ಸ್ ಡಿ. ಟೈಕ್ಲೆಟ್ ಯುದ್ಧದ ಸಮಯದಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಅಮೆರಿಕನ್.ಗಲ್ಫ್ ಯುದ್ಧದಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ್ದ ಇವರು, ಇಂದು ವಿಶ್ವದ ಅತ್ಯಂತ ಶಕ್ತಿಶಾಲಿ ರಕ್ಷಣಾ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.ಇರಾನ್ ಸಂಘರ್ಷದಿಂದಾಗಿ F-35 ಫೈಟರ್ ಜೆಟ್ ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೊಸ ಆರ್ಡರ್ಗಳು ಹರಿದು ಬರುತ್ತಿದ್ದಂತೆ ಕಂಪನಿಯ ಷೇರು ಬೆಲೆಗಳು ಮತ್ತು ಟೈಕ್ಲೆಟ್ ಅವರ ವೈಯಕ್ತಿಕ ಸಂಪತ್ತು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ
ಯುದ್ಧವು ಸಾವು-ನೋವುಗಳನ್ನು ತರುತ್ತದೆ ಎಂಬುದು ಒಂದು ಮುಖವಾದರೆ, ಅದು ಶಸ್ತ್ರಾಸ್ತ್ರ ಮತ್ತು ತೈಲ ಕಂಪನಿಗಳಿಗೆ ಕುಬೇರರಾಗುವ ಹಾದಿಯನ್ನು ಸುಗಮಗೊಳಿಸುತ್ತದೆ ಎಂಬುದಕ್ಕೆ ಈ ಮೂವರೇ ಸಾಕ್ಷಿ.

