ಶನಿವಾರ ( ಮಾರ್ಚ್ 28 ) ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2026ಕ್ಕೆ ಚಾಲನೆ ದೊರಕಲಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ.
ಐಪಿಎಲ್ ಆರಂಭವಾದಾಗಿನಿಂದಲೂ ಒಂದೇ ಒಂದು ಬಾರಿಯೂ ಚಾಂಪಿಯನ್ ಎನಿಸಿಕೊಳ್ಳುವಲ್ಲಿ ವಿಫಲವಾಗಿದ್ದ ಆರ್‌ಸಿಬಿ ಕಳೆದ ಬಾರಿ ತನ್ನ ಚೊಚ್ಚಲ ಟ್ರೋಫಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ ಖಾತೆಯಲ್ಲಿ ಮೊದಲ ಠೇವಣಿ ಮಾಡಿದ್ದು, ಸದ್ಯ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.
ಇನ್ನು ಇದೇ ಹುಮ್ಮಸ್ಸಿನಲ್ಲಿ ಆರ್‌ಸಿಬಿ ತಂಡದ ಆಟಗಾರರು ಕಣಕ್ಕಿಳಿಯುತ್ತಿದ್ದು, ಬೃಹತ್ ವಿಶ್ವಾಸದಿಂದ ಅಭ್ಯಾಸದಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ. ಇನ್ನು ಇದೇ ವೇಳೆ ಮಾಜಿ ಕ್ರಿಕೆಟಿಗ, ಮಾಜಿ ಆರ್‌ಸಿಬಿ ಆಟಗಾರ ಎಬಿ ಡಿ ವಿಲಿಯರ್ಸ್ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಬಗ್ಗೆ ಮಾತನಾಡಿ ಆರ್‌ಸಿಬಿ ಸತತವಾಗಿ ಮೂರು ಟ್ರೋಫಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ.
‘ವಿರಾಟ್ ಕೊಹ್ಲಿಗೆ ಆಟದ ಮೇಲೆ ಅತಿಯಾದ ನಿಷ್ಠೆಯಿದೆ. ಆ ರೀತಿಯ ನಿಷ್ಠಾವಂತ ಆಟಗಾರನನ್ನು ನಾನು ನೋಡಿಲ್ಲ. ಹೀಗಾಗಿ ಕೊಹ್ಲಿ ತಯಾರಿಯಿಲ್ಲದೇ ಕಣಕ್ಕಿಳಿಯುವ ಆಟಗಾರನಲ್ಲ. ಆತನೇನಾದರೂ ಚೆನ್ನಾಗಿ ಆಡದಿದ್ದರೆ ಅದಕ್ಕೆ ಫಾರ್ಮ್ ಕಾರಣವಷ್ಟೇ. ಆತನಿಂದ ನಾನು ಅದ್ಭುತ ಆವೃತ್ತಿಯ ನಿರೀಕ್ಷೆಯಲ್ಲಿದ್ದೇನೆ. ದೊಡ್ಡ ವಿಶ್ರಾಂತಿ ಬಳಿಕ ಕಣಕ್ಕಿಳಿಯುತ್ತಿರುವ ಆತನ ಆಟ ಹೇಗಿರಲಿದೆ ಎಂದು ನಾನು ಭಾವಿಸಬಲ್ಲೆ’ ಎಂದು ಎಬಿಡಿ ಹೇಳಿದ್ದಾರೆ.
‘ವಿರಾಟ್ ಮತ್ತೊಂದು ಟ್ರೋಫಿಗಾಗಿ ಸಿದ್ಧರಾಗಿರುತ್ತಾರೆ, ಅದರ ಬಗ್ಗೆ ಯಾವುದೇ ಅನುಮಾನ ಬೇಡ. ಆರ್‌ಸಿಬಿ ಸತತವಾಗಿ ಕಪ್ ಗೆಲ್ಲಬಹುದು. ಆತ ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವು ಒಮ್ಮ ಗೆದ್ದರೆ ಬೇಗನೆ ಎರಡು, ಮೂರು, ನಾಲ್ಕು ಬಾರಿ ಗೆಲ್ಲಲಿದ್ದೇವೆ ಎಂದು ಹೇಳುತ್ತಿದ್ದದ್ದು ನೆನಪಾಗುತ್ತಿದೆ’ ಎಂದು ಎಬಿಡಿ ಕೊಹ್ಲಿಯ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಎಬಿಡಿ ‘ಆರ್‌ಸಿಬಿ ಈ ಬಾರಿ ಅಬ್ಬರಿಸುವ ಹಂತದಲ್ಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಎರಡರಿಂದ ಮೂರು ಟ್ರೋಫಿಯನ್ನು ಸತತವಾಗಿ ಗೆಲ್ಲಬಹುದು ಯಾರಿಗೆ ಗೊತ್ತು? ಅವರಿಗೆ ಅಬ್ಬರದ ಆರಂಭದ ಅಗತ್ಯವಿದೆ, ಅದು ಅತಿ ಮುಖ್ಯ’ ಎಂದು ತಿಳಿಸಿದರು.

