ಇದೇ ಮಾರ್ಚ್ 28ರಂದು ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿ ಆರಂಭವಾಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಅತ್ತ ಪಾಕಿಸ್ತಾನ ಸೂಪರ್ ಲೀಗ್ ಸಹ ಆರಂಭವಾಗುತ್ತಿದ್ದು, ನಾಳೆ ( ಮಾರ್ಚ್ 26 ) ಲಾಹೋರ್‌ನಲ್ಲಿ ಲಾಹೋರ್ ಕಲಂದರ್ಸ್ ಹಾಗೂ ಹೈದರಾಬಾದ್ ಕಿಂಗ್ಸ್‌ಮನ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಹೀಗೆ ಎರಡು ದೇಶಗಳಲ್ಲಿ ಫ್ರಾಂಚೈಸಿ ಲೀಗ್‌ಗಳು ಆರಂಭವಾಗಲಿದ್ದು, ಪಾಕಿಸ್ತಾನ ಸೂಪರ್ ಲೀಗ್ ಆಡಲು ಹರಾಜಿನಲ್ಲಿ ಬಿಕರಿಯಾಗಿದ್ದ ಕೆಲ ವಿದೇಶಿ ಆಟಗಾರರು ಟೂರ್ನಿಯಿಂದ ಹೊರಬಂದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಮುಂದಾಗಿದ್ದಾರೆ.
ಕಳೆದ ವರ್ಷ 85000 ಡಾಲರ್‌ಗೆ ಪೇಶವರ್ ಜಲ್ಮಿ ತಂಡಕ್ಕೆ ಮಾರಾಟವಾಗಿದ್ದ ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಕಾರ್ಬಿನ್ ಬಾಷ್ ಪಿಎಸ್‌ಎಲ್ ಆಡದೇ ಐಪಿಎಲ್‌ನಲ್ಲಿ ಲಿಜಾರ್ಡ್ ವಿಲಿಯಮ್ಸ್ ಬದಲು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಈ ಕಾರಣಕ್ಕೆ ಕಾರ್ಬಿನ್ ಬಾಷ್‌ರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಒಂದು ವರ್ಷ ನಿಷೇಧಿಸಿತ್ತು.
ಇದೀಗ ಈ ವರ್ಷ ಅದೇ ರೀತಿ ಒಟ್ಟು ನಾಲ್ಕು ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್‌ನಿಂದ ಹೊರಬಂದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಮುಂದಾಗಿದ್ದಾರೆ. ಹೌದು, ಜಿಂಬಾಬ್ವೆಯ ಬ್ಲೆಸಿಂಗ್ ಮುಜರ್‌ಬಾನಿ ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಮಾರಾಟವಾಗಿದ್ದರು. ಇವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಸ್ತಫಿಜರ್ ರಹ್ಮಾನ್ ಬದಲಿ ಆಟಗಾರನಾಗಿ ಐಪಿಎಲ್ ಆಡಲು ಮುಂದಾಗಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಸ್ಪಿನ್ನರ್ ಗುಡಕೇಶ್ ಮೋಟಿ ಲಾಹೋರ್ ಕಲಂದರ್ಸ್ ತಂಡಕ್ಕೆ ಮಾರಾಟವಾಗಿದ್ದರು. ಆದರೆ ಅವರು ಲಕ್ನೋ ಸೂಪರ್ ಜೈಂಟ್ಸ್ ಪರ ವನಿಂದು ಹಸರಂಗ ಬದಲಿ
ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಪರ ಕಣಕ್ಕಿಳಿಯಬೇಕಿದ್ದ ಆಸ್ಟ್ರೇಲಿಯಾದ ವೇಗಿ ಸ್ಪೆನ್ಸರ್ ಜಾನ್‌ಸನ್ ತಂಡವನ್ನು ತೊರೆದಿದ್ದು ನಾಥನ್ ಎಲ್ಲಿಸ್ ಬದಲಿ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಶ್ರೀಲಂಕಾದ ದಸುನ್ ಶನಕ ಸಹ ಪಿಎಸ್‌ಎಲ್ ಆಡದೇ ಸ್ಯಾಮ್ ಕರನ್ ಬದಲಿ ಆಟಗಾರನಾಗಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.

