ಡೆಹ್ರಾಡೂನ್: ಕರ್ನಾಟಕದಲ್ಲಿ ಕರ್ನಾಟಕಾ ಲೋಕಸೇವಾ ಆಯೋಗದಲ್ಲಿ ಪರೀಕ್ಷ ಆಕ್ರಮದ ನಡೆದಿರುವ ಬೆನ್ನಲ್ಲೇ ಉತ್ತರಾಖಂಡದಲ್ಲೂ ಪರೀಕ್ಷಾ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.
2016ರಲ್ಲಿ ನಡೆದ ಉತ್ತರಾಖಂಡದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (VPDO) ಪರೀಕ್ಷೆಯಲ್ಲಿ ನಡೆದ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಾರ್ಯಾಚರಣೆ ನಡೆಸಿದೆ. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ವೈಯಕ್ತಿಕ ಸಹಾಯಕ (PA) ಮನೆ ಮೇಲೆ ದಾಳಿ ನಡೆಸಿದೆ.
ಪಿಎ ಚಂದನ್ ಸಿಂಗ್ ಜೀನಾ ಅವರ ನಿವಾಸ ಸೇರಿದಂತೆ ಡೆಹ್ರಾಡೂನ್‌ನ ಹಲವು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ದಾಳಿ ವೇಳೆ ಚಂದನ್ ಸಿಂಗ್ ಜೀನಾ ನಿವಾಸದಿಂದ 32 ಲಕ್ಷ ರೂ.ನಷ್ಟು ಲೆಕ್ಕಕ್ಕೆ ಸಿಗದ ನಗದು, ಸುಮಾರು 200.5 ಗ್ರಾಂ ಚಿನ್ನದ ನಾಣ್ಯಗಳು ಮತ್ತು ಸರ, ಜೊತೆಗೆ 12 ಐಷಾರಾಮಿ ವಾಚ್‌ಗಳನ್ನ ವಶಪಡಿಸಿಕೊಂಡಿರುವುದಾಗಿ ಇಡಿ ತಿಳಿಸಿದೆ.
ಇಡಿ ಮಾಹಿತಿ ಪ್ರಕಾರ, ಜೀನಾ ನಿವಾಸದಲ್ಲಿ ಪತ್ತೆಯಾದ 12 ವಾಚ್‌ಗಳಲ್ಲಿ ರೋಲೆಕ್ಸ್ , ರಾಡೋ , ಪಿಯಾಜೆ, ಮೊವಾಡೊ, ಟಿಸ್ಸಾಟ್ ಹಾಗೂ Casio Edifice ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳ ವಾಚ್‌ಗಳಿವೆ.
ಜೀನಾ ಅವರು ಪ್ರಸ್ತುತ ಮಾಜಿ ಸಿಎಂ ಹರೀಶ್ ರಾವತ್ ಅವರ ಪಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2014 ರಿಂದ 2017ರ ವರೆಗೆ ಹರೀಶ್ ರಾವತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ವಿಶೇಷ ಕರ್ತವ್ಯ ಅಧಿಕಾರಿ ಆಗಿಯೂ ಕೆಲಸ ಮಾಡಿದ್ದರು.
ಚಂದನ್ ಸಿಂಗ್ ಜೀನಾ ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ ಇದ್ದ ಒಟ್ಟು 52.16 ಲಕ್ಷ ರೂ. ಹಣವನ್ನ ಇಡಿ ಫ್ರೀಜ್ ಮಾಡಿದೆ. ಇದಲ್ಲದೆ, ಜೀನಾ ಅವರ ಮೊಬೈಲ್ ಫೋನನ್ನೂ ವಶಕ್ಕೆ ಪಡೆದಿದ್ದು, ದತ್ತಾಂಶ ಮತ್ತು ಮಾಹಿತಿ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಷ್ಟೇ ಅಲ್ಲ ತನಿಖೆ ಸಂದರ್ಭದಲ್ಲಿ ಜೀನಾ ಭಾರೀ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.
UKSSSCಯ ಆಗಿನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಕರಿಗೆ ಸಂಬಂಧಿಸಿದ ಸ್ಥಳಗಳು, OMR ಶೀಟ್‌ಗಳ ಜವಾಬ್ದಾರಿ ಹೊಂದಿದ್ದ ಖಾಸಗಿ ಕಂಪ್ಯೂಟರ್ ಏಜೆನ್ಸಿಯ ಮಾಲೀಕರ ನಿವಾಸ ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮಧ್ಯವರ್ತಿಗಳ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ

