ಶಿವಮೊಗ್ಗ: ವಾಹನವನ್ನು ದೂರುದಾರರ ಹೆಸರಿಗೆ ವರ್ಗಾಯಿಸಿಕೊಡದೆ ಮತ್ತು ಸೂಕ್ತ ಮಾಹಿತಿ ನೀಡದೆ ವಾಹನವನ್ನು ವಶಕ್ಕೆ ಪಡೆದು ಸೇವಾ ನ್ಯೂನತೆ ಎಸೆಗಿದ ಖಾಸಗಿ ಬ್ಯಾಂಕ್ ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 1.10 ಲಕ್ಷ ರೂ. ದಂಡ ಮತ್ತು ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.
ಗ್ರಾಹಕರಿಗೆ ಪರಿಹಾರ
ವಾಹನವನ್ನು ದೂರುದಾರರ ಹೆಸರಿಗೆ ವರ್ಗಾಯಿಸಿಕೊಡದೆ ಮತ್ತು ಸೂಕ್ತ ಮಾಹಿತಿ ನೀಡದೆ ವಾಹನವನ್ನು ವಶಕ್ಕೆ ಪಡೆದುಕೊಂಡು ಸೇವಾ ನ್ಯೂನತೆ ಎಸಗಿದ ಬ್ಯಾಂಕ್‌ಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ರೂ.1.10 ಲಕ್ಷ ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.
ಶಿವಮೊಗ್ಗ ತಾಲೂಕಿನ ಕುಸ್ಕೂರಿನ ನಿಖಿಲ್ ಆರ್. ಅವರು ಶಿವಮೊಗ್ಗದ ಶಂಕರ ಮಠ ರಸ್ತೆಯಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವಿರುದ್ಧ ವಕೀಲರ ಮೂಲಕ ದೂರು ಸಲ್ಲಿಸಿದ್ದರು. ದೂರುದಾರರು ಫಯಾಜ್ ಬಿನ್ ಬಾಬು ಎಂಬುವರ ಹೆಸರಿನಲ್ಲಿದ್ದ ಐಷರ್ ಪ್ರೊ 3015 (ಸಂಖ್ಯೆ: KA-51-AF-9323) ಸರಕು ಸಾಗಣೆ ವಾಹನವನ್ನು ಖರೀದಿಸಿದ್ದು, ಎದುರುದಾರ ಬ್ಯಾಂಕ್‌ನಿಂದ ರೂ.13,50,000 ಸಾಲವನ್ನು 48 ಕಂತುಗಳಲ್ಲಿ ಪಾವತಿಸಲು ಮಂಜೂರು ಮಾಡಿಸಿಕೊಂಡಿದ್ದರು.
ವಾಹನವನ್ನು ದೂರುದಾರರ ಹೆಸರಿಗೆ ಆರ್.ಟಿ.ಒ. ಮೂಲಕ ವರ್ಗಾಯಿಸಿಕೊಡಲು ತಗಲುವ ವೆಚ್ಚವನ್ನು ಬ್ಯಾಂಕ್ ಪಡೆದಿದ್ದರೂ, ಹೆಸರು ವರ್ಗಾವಣೆ ಮಾಡದೆ ವಿಳಂಬ ಧೋರಣೆ ಅನುಸರಿಸಿತ್ತು. ದೂರುದಾರರು ವಾಹನವನ್ನು ಉಪಯೋಗಿಸದೆಯೇ ₹90,000 ಇಎಂಐ ಪಾವತಿಸಿದ್ದರು. ಆದರೆ, ಎದುರುದಾರ ಬ್ಯಾಂಕ್ ನವರು ಸಾಲದ ಕಂತು ಪಾವತಿಯಾಗಿಲ್ಲವೆಂದು ನೆಪ ಒಡ್ಡಿ, ದಿನಾಂಕ 27/01/2026 ರಂದು ದೂರುದಾರರ ಮನೆಯ ಬಳಿ ನಿಲ್ಲಿಸಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ನಿಖಿಲ್ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ತೀರ್ಪು:
ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಬ್ಯಾಂಕ್‌ನಿಂದ ಸೇವಾ ನ್ಯೂನತೆಯಾಗಿರುವುದನ್ನು ಎತ್ತಿಹಿಡಿದು ದಂಡ ವಿಧಿಸಿ ಆದೇಶಿಸಿದೆ:
ವಾಹನವನ್ನು ವಶಕ್ಕೆ ಪಡೆಯದೇ ದೂರುದಾರರ ಹೆಸರಿಗೆ ದಾಖಲೆಗಳನ್ನು ವರ್ಗಾಯಿಸಿ, ದೂರುದಾರರ ವಶಕ್ಕೆ ನೀಡಬೇಕು. ಹೆಸರು ವರ್ಗಾವಣೆಯಾದ ನಂತರ ಸಾಲದ ಇಎಂಐ ಅನ್ನು ಆರ್‌ಬಿಐ ಸುತ್ತೋಲೆ ಮತ್ತು ನಿಯಮಾವಳಿಗಳಂತೆ ಮರುನಿಗದಿಪಡಿಸಬೇಕು. ಮಾನಸಿಕ ಕಿರುಕುಳ ಮತ್ತು ಪರಿಹಾರವಾಗಿ ರೂ.1,00,000 ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ರೂ.10,000 ಸೇರಿದಂತೆ ಒಟ್ಟು ರೂ.1,10,000 ಗಳನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇಕಡಾ 10 ರಷ್ಟು ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಆಯೋಗವು ಸೆ. 08 ರಂದು ಆದೇಶಿಸಿದೆ.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಭಾಗವಹಿಸಲು ಜಿಲ್ಲಾಧಿಕಾರಿ ಕರೆ
ಶಿವಮೊಗ್ಗ: ಸರ್ಕಾರದ ನಿರ್ದೇಶನದಂತೆ ದಿನಾಂಕ 15-09-2026 ರಂದು ಯುವ ಸಂಸತ್ತು ಸಭೆಗೆ ಚಾಲನೆ ನೀಡುವ ಮೂಲಕ ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಶಿವಮೊಗ್ಗ ಇವರ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮವು ದಿನಾಂಕ: 15-09-2026 ರ ಬೆಳಿಗ್ಗೆ 10 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನ, ಶಿವಮೊಗ್ಗ ಇಲ್ಲಿ ನಡೆಯಲಿದೆ.
ಸೆಪ್ಟೆಂಬರ್ 15ರಂದು ನಡೆಯುವ ಜಿಲ್ಲಾ ಮಟ್ಟದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ. ಈ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಇಲಾಖೆಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕೋರಿದ್ದಾರೆ.’

