ವಿಜಯಪುರ- ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ದಿನದಾವರ ಗ್ರಾಮ ಪಂಚಾಯಿತಿ ವ್‌ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ 3.5 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.
ಸೆಪ್ಟೆಂಬರ್ 29ರಂದು ಬೆಳಗಿನ ಜಾವ 12.26ಕ್ಕೆ ಭೂಕಂಪನ ಸಂಭವಿಸಿದ್ದು, ಭೂಕಂಪದ ಕೇಂದ್ರಬಿಂದು ದಿನದಾವರ ಗ್ರಾಮ ಪಂಚಾಯಿತಿಯ ನೈಋತ್ಯ ದಿಕ್ಕಿನಲ್ಲಿ 1.1 ಕಿಲೋಮೀಟರ್ ದೂರದಲ್ಲಿದೆ. ಭೂಕಂಪನವು ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಕೆ.ಎಸ್.ಎನ್.ಡಿ.ಎಂ.ಸಿ ಮಾಹಿತಿ ನೀಡಿದೆ.
ಭೂಕಂಪನದ ಕೇಂದ್ರಬಿಂದುವು ಇಂಗಳೇಶ್ವರ ಗ್ರಾಮ ಪಂಚಾಯಿತಿಯಿಂದ ಆಗ್ನೇಯ ದಿಕ್ಕಿನಲ್ಲಿ 3 ಕಿಲೋಮೀಟರ್, ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್‌ಯಾಪ್ತಿಯ ರಬಿನಾಳ ಗ್ರಾಮದಿಂದ ದಕ್ಷಿಣ-ನೈಋತ್ಯ ದಿಕ್ಕಿನಲ್ಲಿ 5.3 ಕಿಲೋಮೀಟರ್ ಹಾಗೂ ದಿನದಾವರ ಗ್ರಾಮ ಪಂಚಾಯಿತಿ ವ್‌ಯಾಪ್ತಿಯ ಕಮಣಕೇರಿ ಗ್ರಾಮದಿಂದ ಪಶ್ಚಿಮಕ್ಕೆ 5.5 ಕಿಲೋಮೀಟರ್ ದೂರದಲ್ಲಿದೆ. ಬಸವನ ಬಾಗೇವಾಡಿಯಿಂದ ಈ ಸ್ಥಳವು ಈಶಾನ್ಯ ದಿಕ್ಕಿನಲ್ಲಿ 11.5 ಕಿಲೋಮೀಟರ್ ಹಾಗೂ ವಿಜಯಪುರ ನಗರದಿಂದ ನೈಋತ್ಯ ದಿಕ್ಕಿನಲ್ಲಿ 40 ಕಿಲೋಮೀಟರ್ ದೂರದಲ್ಲಿದೆ.
ಭೂಕಂಪನದ ಪರಿಣಾಮಗಳು
ಕೆಎಸ್‌ಎನ್‌ಡಿಎಂಸಿ ವಿಶ್ಲೇಷಣೆ ಪ್ರಕಾರ, ಭೂಕಂಪನದ ತೀವ್ರತೆ ಕಡಿಮೆಯಾಗಿದ್ದು, ಕೇಂದ್ರಬಿಂದುವಿನಿಂದ ಸುಮಾರು 50ರಿಂದ 60 ಕಿಲೋಮೀಟರ್ ವ್‌ಯಾಪ್ತಿಯವರೆಗೆ ಲಘು ಕಂಪನದ ಅನುಭವವಾಗಿದೆ. ಸ್ಥಳೀಯವಾಗಿ ಕಂಪನ ಅನುಭವವಾಗಬಹುದಾದರೂ, ಕಡಿಮೆ ತೀವ್ರತೆಯ ಕಾರಣದಿಂದ ಜನಜೀವನಕ್ಕೆ ಯಾವುದೇ ಹಾನಿಯಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.
ಭೂಕಂಪನದ ಕೇಂದ್ರಬಿಂದು ಭೂಕಂಪನ ವಲಯ-3ರಲ್ಲಿ ಇದ್ದು, ಭೂವೈಜ್ಞಾನಿಕ ನಕ್ಷೆಯ ಪ್ರಕಾರ ಈ ಪ್ರದೇಶದಲ್ಲಿ ಯಾವುದೇ ಪ್ರಮುಖ ರಚನಾತ್ಮಕ ವ್‌ಯತ್ಯಾಸಗಳು ಕಂಡುಬಂದಿಲ್ಲ ಎಂದು ಕೆ.ಎಸ್.ಎನ್.ಡಿ.ಎಂ.ಸಿ ತಿಳಿಸಿದೆ.
ಸಾರ್ವಜನಿಕರಿಗೆ ತಿಳಿಸಿದ್ದಾರೆ ಸಲಹೆಗಳು
ಭೂಕಂಪನದ ತೀವ್ರತೆ ಹಾಗೂ ಅನುಭವವಾದ ಕಂಪನ ಎರಡೂ ಕಡಿಮೆಯಾಗಿರುವುದರಿಂದ ಸಾರ್ವಜನಿಕರು ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಸ್ಪಷ್ಟಪಡಿಸಿದೆ.

