ಮಲಯಾಳಂ ನಟ ಫಹಾದ್ ಫಾಸಿಲ್ ತಮ್ಮ ಮುಂಬರುವ Don’t Trouble the Trouble ಚಿತ್ರದ ಪ್ರಚಾರದ ವೇಳೆ ಪತ್ನಿ ನಜ್ರಿಯಾ ನಜೀಮ್ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. “ನಾನು ಮಗುವನ್ನೇ ಮದುವೆಯಾಗಿದ್ದೇನೆ” ಎಂದು ಫಹಾದ್ ಹೇಳಿದ್ದು, ಸದ್ಯ ಈ ಹೇಳಿಕೆ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಸಹನಟಿ ಸ್ಸಾರಾ ಪಾಲೇಕರ್ ಅವರ ತಾಳ್ಮೆ ಮತ್ತು ವೃತ್ತಿಪರತೆಯನ್ನು ಹೊಗಳುವ ಸಂದರ್ಭದಲ್ಲಿ ಫಹಾದ್ ಈ ಹಾಸ್ಯಮಯ ಮಾತು ಹಂಚಿಕೊಂಡಿದ್ದಾರೆ.
ಹೌದು. ನಟ ಫಹಾದ್ ಫಾಸಿಲ್ ತಮ್ಮ ಮುಂಬರುವ Don’t Trouble the Trouble ಚಿತ್ರದ ಪ್ರಚಾರದ ವೇಳೆ ಪತ್ನಿ ನಜ್ರಿಯಾ ನಜೀಮ್ ಕುರಿತು ತಮಾಷೆಯಾಗಿ ಮಾತನಾಡಿದ್ದಾರೆ. ಮಕ್ಕಳನ್ನು ನಿಭಾಯಿಸುವಲ್ಲಿ ತಮ್ಮ ತಾಳ್ಮೆ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುವುದಕ್ಕೆ ಕಾರಣವೇನು ಎಂಬುದನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ.
‘ನಾನು ಮಗುವನ್ನೇ ಮದುವೆಯಾಗಿದ್ದೇನೆ’ ಎಂದ ಫಹಾದ್
ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮ ಸಹನಟಿ ಸ್ಸಾರಾ ಪಾಲೇಕರ್ (Ssara Palekar) ಜೊತೆಗಿನ ಅನುಭವವನ್ನು ಹಂಚಿಕೊಂಡ ಫಹಾದ್, ತಮ್ಮ ವೈವಾಹಿಕ ಜೀವನದ ಬಗ್ಗೆ ತಮಾಷೆಯ ಮಾತು ಹೇಳಿದ್ದಾರೆ.
“ನಾನು ಮಗುವನ್ನೇ ಮದುವೆಯಾಗಿದ್ದೇನೆ. ಹಾಗಾಗಿ ಮಕ್ಕಳನ್ನು ನಿಭಾಯಿಸುವ ನಿಮ್ಮ ತಾಳ್ಮೆ ಅದ್ಭುತ ಎಂದು ಜನರು ಹೇಳುತ್ತಾರೆ. ನಾನು ಹೇಳುತ್ತೇನೆ, ಮನೆಯಲ್ಲಿ ಒಬ್ಬಳು ಇದ್ದಾಳೆ, ಅವಳನ್ನು ನಿಭಾಯಿಸುತ್ತಲೇ ಬಂದಿದ್ದೇನೆ. ಆದರೆ ನನ್ನನ್ನು ನಿಭಾಯಿಸಿದ ಒಂದು ಮಗುವನ್ನು ನಾನು ಭೇಟಿಯಾದೆ” ಎಂದು ಫಹಾದ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.ಫಹಾದ್ ಈ ಮಾತನ್ನು ತಮ್ಮ ಪತ್ನಿ ನಜ್ರಿಯಾ ನಜೀಮ್ ಅವರನ್ನು ಉಲ್ಲೇಖಿಸಿ ತಮಾಷೆಯಾಗಿ ಹೇಳಿದ್ದಾರೆ.
ಫಹಾದ್ಗೆ ಡೈಲಾಗ್ ನೆನಪಿಸಲು ಸಹಾಯ ಮಾಡಿದ ಸ್ಸಾರಾ
ಚಿತ್ರದ ಚಿತ್ರೀಕರಣದ ವೇಳೆ ತಾವು ಡೈಲಾಗ್ಗಳನ್ನು ಮರೆತಾಗ ಸ್ಸಾರಾ ಸಹಾಯ ಮಾಡುತ್ತಿದ್ದರು ಎಂದು ಫಹಾದ್ ಹೇಳಿದ್ದಾರೆ.“ನಾನು ಪ್ರತಿಬಾರಿಯೂ ನನ್ನ ಡೈಲಾಗ್ ಅನ್ನು ತಪ್ಪಾಗಿ ಹೇಳಿದಾಗ, ಅವಳು ಅದನ್ನು ಸರಿಪಡಿಸುತ್ತಿದ್ದಳು. ‘ಸರ್, ಇದು ಹೀಗೆ ಇರಬೇಕು ಎಂದು ಅನಿಸುತ್ತಿದೆ’ ಎಂದು ಹೇಳುತ್ತಿದ್ದಳು. ನನ್ನ ಎಲ್ಲಾ ಡೈಲಾಗ್ಗಳನ್ನೂ ಅವಳು ಕಂಠಪಾಠ ಮಾಡಿಕೊಂಡಿದ್ದಳು” ಎಂದು ಫಹಾದ್ ಹೇಳಿದ್ದಾರೆ.
ಸ್ಸಾರಾ ಅವರ ತಾಳ್ಮೆ ಮತ್ತು ಸಿದ್ಧತೆಯನ್ನು ಫಹಾದ್ ಶ್ಲಾಘಿಸಿದ್ದಾರೆ.“ನನ್ನೊಂದಿಗೆ ಇಷ್ಟು ತಾಳ್ಮೆಯಿಂದ ಇದ್ದ ಸಹನಟಿಯನ್ನು ನಾನು ಹಿಂದೆಂದೂ ನೋಡಿಲ್ಲ. ಇಂದಿಗೂ ಅವಳು ನನ್ನ ನೆಚ್ಚಿನ ಸಹನಟಿ” ಎಂದು ಅವರು ಹೇಳಿದ್ದಾರೆ.
ಪ್ರೇಕ್ಷಕರಿಗೆ ಸಿನಿಮಾ ನೋಡುವಂತೆ ಮನವಿ
Don’t Trouble the Trouble ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಡೀ ತಂಡ ಉತ್ತಮ ಅನುಭವ ಹೊಂದಿತ್ತು ಎಂದು ಫಹಾದ್ ಹೇಳಿದ್ದಾರೆ. ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.
ತಂಡವು ಯಾವ ಉತ್ಸಾಹ ಮತ್ತು ಆನಂದದಿಂದ ಸಿನಿಮಾವನ್ನು ನಿರ್ಮಿಸಿದೆಯೋ, ಅದೇ ರೀತಿಯ ಅನುಭವವನ್ನು ಪ್ರೇಕ್ಷಕರು ಕೂಡ ಪಡೆದುಕೊಂಡರೆ ತಮ್ಮ ಚಿತ್ರದ ಉದ್ದೇಶ ಈಡೇರುತ್ತದೆ ಎಂದು ಫಹಾದ್ ಹೇಳಿದ್ದಾರೆ.

