HomeCrimeವಿವಾಹಿತೆಯನ್ನು ಭೇಟಿಯಾಗಲು ಹೋಗಿ ಸಿಕ್ಕಿಬಿದ್ದ ಯುವಕ ; ತಲೆಕೆಳಗಾಗಿ ನೇತುಹಾಕಿ ಚಿತ್ರಹಿಂಸೆ ನೀಡಿದ ವಿಡಿಯೋ ವೈರಲ್‌...

ವಿವಾಹಿತೆಯನ್ನು ಭೇಟಿಯಾಗಲು ಹೋಗಿ ಸಿಕ್ಕಿಬಿದ್ದ ಯುವಕ ; ತಲೆಕೆಳಗಾಗಿ ನೇತುಹಾಕಿ ಚಿತ್ರಹಿಂಸೆ ನೀಡಿದ ವಿಡಿಯೋ ವೈರಲ್‌ | Watch

ವಿವಾಹಿತ ಮಹಿಳೆಯೊಬ್ಬಳನ್ನು ಭೇಟಿಯಾಗಲು ನೆರೆಯ ಗ್ರಾಮಕ್ಕೆ ತೆರಳಿದ್ದ ಯುವಕನೊಬ್ಬನನ್ನು ಹಿಡಿದು, ಹಗ್ಗದಿಂದ ಕಟ್ಟಿ ತಲೆಕೆಳಗಾಗಿ ತೂಗುಹಾಕಿ ಅಮಾನವೀಯವಾಗಿ ಥಳಿಸಿರುವ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಕಾಸಿಂಪುರ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿಗಳ ಪ್ರಕಾರ, ಯುವಕ ಮಹಿಳೆಯನ್ನು ಭೇಟಿ ಮಾಡಲು ಬಂದಿದ್ದ ವೇಳೆ ಆಕೆಯ ಕುಟುಂಬದ ಸದಸ್ಯರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಆತನ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆತನ ಕಾಲುಗಳಿಗೆ ಹಗ್ಗ ಕಟ್ಟಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ತಲೆಕೆಳಗಾಗಿ ನೇತುಹಾಕಿ ರಾಕ್ಷಸೀ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಬಳಿಕ ಆತನನ್ನು ಕೆಳಗಿಳಿಸಿ ರಸ್ತೆಯಲ್ಲಿದ್ದ ಕಂಬವೊಂದಕ್ಕೆ ಕಟ್ಟಿಹಾಕಲಾಗಿದೆ. ಈ ಭೀಕರ ದೃಶ್ಯಾವಳಿಗಳನ್ನು ಕೆಲವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅದರಲ್ಲಿ ಯುವಕ ತಲೆಕೆಳಗಾಗಿ ನೇತಾಡುತ್ತಾ, ಜನರ ಎದುರು ನೋವಿನಿಂದ ಮುಖ ಮುಚ್ಚಿಕೊಳ್ಳಲು ಹೆಣಗಾಡುತ್ತಿರುವ ದೃಶ್ಯಗಳು ದಾಖಲಾಗಿವೆ. ಸುತ್ತಲೂ ಜನರು ಗುಂಪುಗೂಡಿ ಆತನನ್ನು ಲೇವಡಿ ಮಾಡುತ್ತಿರುವುದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯ ಮರುದಿನ ಬೆಳಗ್ಗೆ ಮಾಹಿತಿ ತಿಳಿದ ಯುವಕನ ಕುಟುಂಬಸ್ಥರು ಗಾಬರಿಯಿಂದ ಗ್ರಾಮಕ್ಕೆ ಧಾವಿಸಿದ್ದಾರೆ. ಬಳಿಕ ಉಭಯ ಕುಟುಂಬಗಳ ನಡುವೆ ವಿವಾದ ಬಗೆಹರಿಸಲು ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಸಭೆ ಕರೆಯಲಾಗಿತ್ತು. ಈ ಸಂಧಾನ ಸಭೆಯ ಸಂದರ್ಭದಲ್ಲಿ ಯುವಕನನ್ನು ಬಿಡುಗಡೆ ಮಾಡಲು ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಎದುರು ಗುಂಪಿನವರು ಬರೋಬ್ಬರಿ 5 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಸಂತ್ರಸ್ತನ ಕುಟುಂಬವು ಗಂಭೀರ ಆರೋಪ ಮಾಡಿದೆ.

ಈ ಕೃತ್ಯದ ವಿಡಿಯೋ ಅಂತರ್ಜಾಲದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕಾನೂನನ್ನು ಕೈಗೆತ್ತಿಕೊಂಡು ಈ ರೀತಿ ಅಮಾನವೀಯವಾಗಿ ವರ್ತಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿಬಂದಿದೆ. ಪ್ರಕರಣದ ವಿಡಿಯೋ ಸಾಕ್ಷ್ಯ ಹಾಗೂ ಸಂತ್ರಸ್ತ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular