ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಈಜಲು ಇಳಿದ ಪಶುವೈದ್ಯಾಧಿಕಾರಿ ನೀರು ಪಾಲಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಕ್ರೆಯ ಬಾಳೆಗೆರೆಯ ಸಮೀಪ ಘಟನೆ ನಡೆದಿದೆ.
ಸೊರಬ ತಾಲೂಕಿನ ಹೊರಬೈಲಿನ ನಿವಾಸಿಯಾಗಿರುವ ಡಾ.ಸುನಿಲ್(38) ನೀರು ಪಾಲಾದವರು ಎಂದು ಗುರುತಿಸಲಾಗಿದೆ. ಕುಟುಂಬ ಸಮೇತರಾಗಿ ಶರಾವತಿ ಹಿನ್ನೀರಿಗೆ ಪ್ರವಾಸಕ್ಕೆ ತೆರಳಿದ್ದಾಗ ಅವಘಡ ಸಂಭವಿಸಿದೆ. ಹಿನ್ನೀರಿನಲ್ಲಿ ಸುಮಾರು 20 ಮೀಟರ್ ದೂರ ಈಜಲು ವೈದ್ಯ ಸುನಿಲ್ ಹೋಗಿದ್ದಾರೆ. ಆದರೆ, ಹಿಂದಿರುಗಿ ಬರಲು ಪ್ರಯತ್ನಿಸುವಾಗ ಆಯಾಸದಿಂದ ಸಾಧ್ಯವಾಗಿರಲಿಲ್ಲ.
ಪಶು ವೈದ್ಯ ಡಾ. ಸುನಿಲ್ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಾಗರ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ವೈದ್ಯೆ ಆಗಿರುವ ಪತ್ನಿ, ಇಬ್ಬರು ಮಕ್ಕಳು ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

