HomeKarnatakaವಿಬಿಜಿ ರಾಮ್ ಜಿ: ಬರಪರಿಸ್ಥಿತಿ ಮತ್ತು ಉದ್ಯೋಗ ಸಮಸ್ಯೆಗಳು

ವಿಬಿಜಿ ರಾಮ್ ಜಿ: ಬರಪರಿಸ್ಥಿತಿ ಮತ್ತು ಉದ್ಯೋಗ ಸಮಸ್ಯೆಗಳು

ಬೆಂಗಳೂರು- ರಾಜ್ಯದ 101 ತಾಲೂಕಿನಲ್ಲಿ ಬರಪರಿಸ್ಥಿತಿ ಇದ್ದು, ಗ್ರಾಮೀಣ ಜನರ ಬೇಡಿಕೆಗೆ ಅನುಗುಣವಾಗಿ ವಿಬಿಜಿ ರಾಮ್ ಜಿ ಅಡಿಯಲ್ಲಿ ಉದ್ಯೋಗ ನೀಡಬೇಕು ಮತ್ತು 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ದಕ್ಷಿಣ, ಹಾಸನ, ಚಿಕ್ಕಮಗಳೂರು, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ವಿಬಿಜಿ ರಾಮ್ ಜಿ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬೆಂಗಳೂರು ಸುತ್ತಮುತ್ತ 382 ರೂ.ಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಎಂಬುದು ಸರಿಯಲ್ಲ. ಅವರ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಆಗುತ್ತದೆ, ಕೆರೆಯ ಹೂಳು ತೆಗೆದರೆ ನೀರಿನ ಸಂಗ್ರಹ ಹೆಚ್ಚುತ್ತದೆ, ಉತ್ತಮ ರಸ್ತೆ ಆಗುತ್ತದೆ, ಕೊಳವೆ ಬಾವಿಗಳ ಮರುಪೂರಣ ಆಗುತ್ತದೆ, ಅಂತರ್ಜಲ ಹೆಚ್ಚುತ್ತದೆ ಎಂದು ಮನವೊಲಿಸಿದರೆ ಜನರು ಕೆಲಸಕ್ಕೆ ಬರುತ್ತಾರೆ ಎಂದು ಸಚಿವರು ಹೇಳಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ವರ್ಷ ನರೇಗಾದಡಿ ನೀಡಲಾಗಿದ್ದ ಉದ್ಯೋಗಕ್ಕೆ ಹೋಲಿಸಿದರೆ ವಿಬಿಜಿ ರಾಮ್ ಜಿಯಲ್ಲಿ ಶೇ.80ರಷ್ಟು ಕಡಿಮೆಯಾಗಿದೆ. ಜಿಲ್ಲೆಯ 120 ಗ್ರಾಮ ಪಂಚಾಯತಿ ಇದ್ದು, ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ನಿತ್ಯ ಕನಿಷ್ಠ 50 ಜನರಿಗೆ ಕೆಲಸ ಕೊಟ್ಟರೂ, 6000 ಜನರಿಗೆ ಉದ್ಯೋಗ ಕಲ್ಪಿಸಬಹುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲವು ಗ್ರಾಮ ಪಂಚಾಯತಿಗಳಲ್ಲಿ ವಿಬಿಜಿ ರಾಮ್ ಜಿ ಕೂಲಿ ಹಣ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಲಾಗಿನ್ ನಲ್ಲೇ ಉಳಿದಿದೆ. ಈ ರೀತಿ ವಿಳಂಬ ಮಾಡಿದರೆ ದಂಡ ಹಾಕಲೂ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿ ಪಿಡಿಓಗಳು ವೇತನ ಪಾವತಿಗೆ ತತ್ ಕ್ಷಣ ಕ್ರಮ ವಹಿಸಬೇಕು. ವಾರದಲ್ಲಿ 2 ದಿನ ಖಜಾನೆಗೆ ಹೋಗಿ ಹಣ ಪಾವತಿ ಮಾಡಿಸಲು ಆಸಕ್ತಿ ವಹಿಸಬೇಕು. ಸಕಾಲದಲ್ಲಿ ವೇತನ ಬಂದರೆ ಜನರೂ ಕೆಲಸಕ್ಕೆ ಬರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಹಾಜರಿದ್ದ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಮಾಗಡಿಯಲ್ಲಿ ವಿಬಿಜಿ ರಾಮ್ ಜಿ ಸಮರ್ಪಕ ಅನುಷ್ಠಾನದ ಪರಿಶೀಲನೆಯನ್ನು ತಾವೂ ಮಾಡುವುದಾಗಿ ತಿಳಿಸಿದರು.

ಜಿಲ್ಲೆಗೆ ಈಗಾಗಲೇ 20 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. 1ಕೋಟಿ 86 ಲಕ್ಷ ರೂ. ವೇತನ ಪಾವತಿ ಆಗಬೇಕಿದ್ದರೂ, ಈವರೆಗೆ 40 ಲಕ್ಷ ರೂ. ಮಾತ್ರ ಪಾವತಿ ಆಗಿದೆ. 1.46 ಕೋಟಿ ರೂ. ಕೂಲಿ ಪಾವತಿ ಆಗಿಲ್ಲ. ಈ ರೀತಿ ವಿಳಂಬ ಆಗದಂತೆ ಜಿಲ್ಲಾ ಪಂಚಾಯತಿ ಸಿಇಓಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಅರಣ್ಯ ಅನುಮತಿ ಸವಾಲು

ಅರಣ್ಯ ಅನುಮತಿಗೆ ಪ್ರಯತ್ನ: ಈಶ್ವರ ಖಂಡ್ರೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ ಕೆರೆ, ಸರೋವರ, ನದಿಗಳಿಂದ ನೀರು ತರಲು ಕೊಳವೆ ಅಳವಡಿಕೆಗೆ ಅರಣ್ಯ ಅನುಮತಿ ದೊರಕದೆ ಕಾಮಗಾರಿ ವಿಳಂಬವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರಕ್ಕೆ ಕಳಿಸಿ ನಿಯಮಾನುಸಾರ ಶೀಘ್ರ ಅನುಮತಿ ಪಡೆಯಲು ಕ್ರಮ ವಹಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಧಾರವಾಡ, ಚಿಕ್ಕಮಗಳೂರು, ಹಾಸನ, ಬಾಗಲಕೋಟೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಪಿಡಿಓಗಳೊಂದಿಗೆ ಸಚಿವರು ಪ್ರಗತಿ ಪರಿಶೀಲನೆ ನಡೆಸಿ ಸೂಕ್ತ ಸೂಚನೆ ನೀಡಿದರು.

ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ಡಿ. ರಂದೀಪ್, ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular