ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಪ್ರೇಮ ಸಂಬಂಧದ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಇ-ರಿಕ್ಷಾದ ಒಳಗಡೆಯೇ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಭೀಕರ ದೃಶ್ಯವು ರಸ್ತೆಯಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿ ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಸರಸ್ವತಿ ಎಂದು ಗುರುತಿಸಲಾಗಿದೆ. ಆಗಸ್ಟ್ 15 ರಂದು ಸಿತಾರ್‌ಗಂಜ್ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿಯ ಜ್ವಾಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ತಕ್ಷಣವೇ ಋಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನಗಳ ಬಳಿಕ, ಅಂದರೆ ಆಗಸ್ಟ್ 19 ರಂದು ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಸರಸ್ವತಿ ಮತ್ತು ಶಕ್ತಿಫಾರ್ಮ್‌ನ ಬೈಕುಂಠಪುರ ನಿವಾಸಿ ಪವಿತ್ರ ಸರ್ಕಾರ್ ಎಂಬಾತನ ನಡುವೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಪವಿತ್ರ ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದ. ಸರಸ್ವತಿ ಕೂಡ ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ದೂರವಾಗಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರ ಸಂಬಂಧದ ವಿಚಾರ ಪವಿತ್ರನ ಕುಟುಂಬಕ್ಕೆ ತಿಳಿದು ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಚೌಕಿಯಲ್ಲಿ ಪಂಚಾಯಿತಿ ನಡೆದಾಗ, ಕುಟುಂಬದ ಒತ್ತಡದಿಂದಾಗಿ ಸಂಬಂಧವನ್ನು ಮುಂದುವರಿಸುವುದಿಲ್ಲ ಎಂದು ಪವಿತ್ರ ತಿಳಿಸಿದ್ದ. ನಂತರ ಆತ ಸರಸ್ವತಿಯ ಸಂಪರ್ಕ ಕಡಿದುಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಇದರಿಂದ ತೀವ್ರ ಮನನೊಂದ ಸರಸ್ವತಿ, ಆಗಸ್ಟ್ 15 ರಂದು ಸಿತಾರ್‌ಗಂಜ್‌ಗೆ ಬಂದು ಪವಿತ್ರನ ಇ-ರಿಕ್ಷಾ ಹತ್ತಿದ್ದರು. ವಾಹನ ಸಂಚರಿಸುತ್ತಿದ್ದಾಗಲೇ ಆಕೆ ತನಗೆ ತಾನೇ ಬೆಂಕಿ ಹೊತ್ತಿಸಿಕೊಂಡಿರುವುದು ಸಿಸಿ ಟಿವಿ ದೃಶ್ಯಾವಳಿಗಳಿಂದ ದೃಢಪಟ್ಟಿದೆ.
ಆರಂಭದಲ್ಲಿ ಸರಸ್ವತಿಯ ತಂದೆ ದಯಾಳ್ ಚಂದ್ರ ಮಂಡಲ್ ಅವರು, ಪವಿತ್ರನೇ ತನ್ನ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಕೊಲೆ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಮಹಿಳೆಯೇ ಬೆಂಕಿ ಹಚ್ಚಿಕೊಂಡಿರುವುದು ಸಾಬೀತಾಗಿದೆ. ಆದರೆ ಆಕೆಗೆ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಪ್ರಕರಣದ ಸೆಕ್ಷನ್‌ಗಳನ್ನು ಬದಲಾಯಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಿಯಕರ ಪವಿತ್ರ ಸರ್ಕಾರ್ ಮತ್ತು ಆತನ ಸಹಚರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

