ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತಡಡಿಯಲ್ಲಿ ಮತ್ತೆ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಹೂಳು ಮತ್ತು ಅಲೆಗಳ ಅಬ್ಬರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಸಮುದ್ರದಲ್ಲಿ ಮುಳಗಿ ಹೋಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರನ್ನ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಭಾಗದ ತದಡಿ ಬಂದರಿನಲ್ಲಿ ಈ ಅವಘಡ ಸಂಭವಿಸಿದೆ. ಸುರೇಂದ್ರ ಹರಿಕಂತ್ರ ಎನ್ನುವವರಿಗೆ ಸೇರಿದ ಲಕ್ಷ್ಮೀಕೃಪ ಎನ್ನುವ ಹೆಸರಿನ ಬೋಟ್ ಇದಾಗಿದ್ದು, ಇಂದು ಗೋಕರ್ಣದ ತದಡಿಯ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಆದರೇ ಸ್ವಲ್ಪ ದೂರದಲ್ಲೇ ಹೂಳು ತುಂಬಿದ ಅಳವೆಯಲ್ಲಿ ಸಿಲುಕಿಕೊಂಡಿದ್ದು, ಅಲೆಗಳ ಹೊಡೆತಕ್ಕೆ ತಳಭಾಗದಲ್ಲಿ ಹಾನಿಯಾಗಿ ಮುಳುಗಿದೆ. ಬೋಟ್ ಮುಳುಗಡೆಯಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಹಾನಿಯಾಗಿದೆ.
ಎರಡು ದಿನದ ಹಿಂದೆ ಇದೇ ಜಾಗದಲ್ಲಿ ಶ್ರೀದೇವಿ ಹೆಸರಿನ ಬೋಟ್ ಮುಳುಗಡೆಯಾಗಿತ್ತು. ತದಡಿಯ ಅಳಿವೆಯ ಹೂಳಿನಿಂದ ಪದೇಪದೇ ಇದೇ ಜಾಗದಲ್ಲಿ ಬೋಟುಗಳು ಮುಳುಗುತಿದ್ದು, ಒಂದೇ ವಾರದಲ್ಲಿ ಎರಡು ಬೋಟ್ ಮುಳುಗಡೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹೂಳು ಎತ್ತುವ ಕೆಲಸ ಮಾಡಬೇಕು ದುರಂತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

