ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಡಿಕೆ ಶಿವಕುಮಾರ್ ಸಂಪುಟದಲ್ಲಿ ವಿಧಾನಸಭೆಯ ಹಾಲಿ ಸಭಾಧ್ಯಕ್ಷ ಯು ಟಿ ಖಾದರ್ ಕೂಡ ಸ್ಥಾನ ಪಡೆಯಲಿದ್ದಾರೆ.
ಈ ಹಿನ್ನಲೆಯಲ್ಲಿ ಬುಧವಾರ ಬೆಳಗ್ಗೆ ವಿಧಾನಸಭೆಯ ಕಾರ್ಯದರ್ಶಿಯವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಸಂಜೆ 4.05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಯುಟಿ ಖಾದರ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ದೆಹಲಿ ನಾಯಕರಿಂದಲೇ ದೂರವಾಣಿ ಕರೆ
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಬೇಕೆಂದು ಖುದ್ದು ದೆಹಲಿ ನಾಯಕರಿಂದಲೇ ದೂರವಾಣಿ ಕರೆ ಬಂದಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಮಂಗಳವಾರ ಖಾದರ್ ಅವರು ವಿಧಾನಸಭೆಯ ಸಚಿವಾಲಯದ ಸಿಬ್ಬಂದಿಗಳಿಗೆ ಸ್ನೇಹಪೂರ್ವಕವಾಗಿ ಔತಣಕೂಟ ಏರ್ಪಡಿಸಿದ್ದರು.
ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ ಖಾದರ್
ಇದೊಂದು ಸಹಜ ಪ್ರಕ್ರಿಯೆ ಎಂದು ಸಿಬ್ಬಂದಿಗಳು ಹೇಳಿದ್ದರಾದರೂ, ತಾವು ಈವರೆಗೂ ವಿಧಾನಸಭೆಯ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ರೀತಿಯ ಸಹಕಾರ ನೀಡಿದ ಸಿಬ್ಬಂದಿಗಳಿಗೆ ಕೃತಜ್ಞತಾ ಪೂರ್ವಕವಾಗಿ ಔತಣಕೂಟವನ್ನು ಏರ್ಪಡಿಸಿದ್ದರೆಂದು ತಿಳಿದುಬಂದಿದೆ.
ತಾವು ಸಚಿವರಾಗಿ ಇನ್ನು ಮುಂದೆ ಕಾರ್ಯನಿರ್ವಹಿಸುವುದರಿಂದ ಮುಂದೆ ಯಾರೇ ನನ್ನ ಸ್ಥಾನಕ್ಕೆ ಬಂದರೂ ಇದೇ ರೀತಿ ನಿಮ್ಮ ಸಹಕಾರ ಇರಲಿ ಎಂದು ಖಾದರ್ ಅವರು ಸಚಿವಾಲಯದ ಸಿಬ್ಬಂದಿಗಳಿಗೆ ಸಲಹೆ ನೀಡಿದ್ದಾರೆ.
ಇಂದು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ
ಮೂಲಗಳ ಪ್ರಕಾರ, ಯು.ಟಿ. ಖಾದರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಸ್ಪೀಕರ್ ಸ್ಥಾನಕ್ಕೆ ಇಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಈಗಾಗಲೇ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿಗೆ ಸಿದ್ಧ: ಖಾದರ್
ಸ್ವತಃ ಯು.ಟಿ. ಖಾದರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಪಕ್ಷದ ಹೈಕಮಾಂಡ್ ನನಗೆ ನೀಡಿರುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧನಿದ್ದೇನೆ. ಸ್ಪೀಕರ್ ಆಗಿಯೇ ಮುಂದುವರಿಯಬೇಕೆಂದರೆ ಅದಕ್ಕೂ ಬದ್ಧ, ಸಚಿವನಾಗಬೇಕೆಂದರೆ ಅದಕ್ಕೂ ನಾನು ಸಿದ್ಧ” ಎಂದು ಸ್ಪಷ್ಟಪಡಿಸಿದ್ದಾರೆ.
ಇದುವರೆಗೂ ಹೈಕಮಾಂಡ್‌ನಿಂದ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂಬುದನ್ನೂ ಅವರು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಕಾರ್ಯತಂತ್ರವೇ?
ಯು.ಟಿ. ಖಾದರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಒಂದು ಕಾರ್ಯತಂತ್ರವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕರಾವಳಿ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರಾಗಿರುವ ಖಾದರ್ ಅವರ ಸೇವೆ ಸಚಿವ ಸಂಪುಟದಲ್ಲಿ ಅಗತ್ಯವಿದೆ ಎಂಬುದು ಪಕ್ಷದ ನಾಯಕರ ಆಲೋಚನೆಯಾಗಿರಬಹುದು ಎಂದು ಹೇಳಲಾಗುತ್ತಿದೆ.
ಸ್ಪೀಕರ್ ಸ್ಥಾನದ ಕುರಿತು ಚರ್ಚೆ
ಖಾದರ್ ಅವರು ಸಚಿವರಾದಲ್ಲಿ, ತೆರವಾಗುವ ಸ್ಪೀಕರ್ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆಯೂ ಪಕ್ಷದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಡಾ. ಜಿ. ಪರಮೇಶ್ವರ್ ಅವರ ಹೆಸರು ಕೂಡ ಈ ಸ್ಥಾನಕ್ಕೆ ಕೇಳಿಬರುತ್ತಿದೆ.
ಇದರ ಜೊತೆಗೆ ಹಿರಿಯರಾದ ಹೆಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ ಹಲವರ ಹೆಸರುಗಳು ಚಾಲ್ತಿಯಲ್ಲಿವೆ.

