ಪ್ರಾವಿಡೆನ್ಸ್(ರೋಡ್ ಐಲೆಂಡ್): ಯುನೈಟೆಡ್ ಸ್ಟೇಟ್ಸ್‌ನ ರೋಡ್ ಐಲೆಂಡ್‌ನ ಹಾಕಿ ಕ್ರೀಡಾಂಗಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಈ ಘಟನೆ ಸ್ಥಳೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ.
ಕೊಲ್ಲಲ್ಪಟ್ಟವರಲ್ಲಿ ಒಬ್ಬಳು ಚಿಕ್ಕ ಹುಡುಗಿ. ಗುಂಡು ಹಾರಿಸಿದ ವ್ಯಕ್ತಿ ನಂತರ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಳಿಕೋರನು ತನ್ನ ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ಹಿಂದಿನ ಉದ್ದೇಶವನ್ನು ಇನ್ನೂ ಸಂಪೂರ್ಣವಾಗಿ ವಿವರಿಸಲಾಗಿಲ್ಲ ಮತ್ತು ತನಿಖೆ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೋಡ್ ಐಲೆಂಡ್ ಗವರ್ನರ್ ಡ್ಯಾನ್ ಮೆಕ್ಕೀ, ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಗುಂಡಿನ ದಾಳಿಯ ನಂತರ ಅವರು ಮೇಯರ್ ಗ್ರೆಬಿಯನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎಂದು ದೃಢಪಡಿಸಿದ್ದಾರೆ.
ಪಾವ್‌ಟಕೆಟ್‌ನಲ್ಲಿರುವ ಡೆನ್ನಿಸ್ ಎಂ. ಲಿಂಚ್ ಅರೆನಾದಲ್ಲಿ ನಡೆದ ಗುಂಡಿನ ದಾಳಿಯನ್ನು ನಾವು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾನು ಮೇಯರ್ ಗ್ರೆಬಿಯನ್ ಮತ್ತು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ಪೊಲೀಸರೊಂದಿಗೆ ಮಾತನಾಡಿದ್ದೇನೆ. ಪಾವ್‌ಟಕೆಟ್ ಮತ್ತು ಇದರಲ್ಲಿ ಭಾಗಿಯಾಗಿರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ ಎಂದು ಗವರ್ನರ್ ಡ್ಯಾನ್ ಮೆಕ್ಕೀ ಹೇಳಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಎರಡು ತಂಡಗಳು ಕ್ರೀಡಾಂಗಣದಲ್ಲಿ ಹಾಕಿ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

