ಬೆಂಗಳೂರು : ಆಸ್ತಿ ಆಸೆಗೆ ಬಿದ್ದ ಪುತ್ರರು ಜನ್ಮ ನೀಡಿದ ತಂದೆಯನ್ನೇ ಹತ್ಯೆಗೈದಿರುವ ಮನಕಲಕುವ ಘಟನೆ ಬೆಂಗಳೂರಿನ ಇಂದಿರಾನಗರದ ದೂಪನಹಳ್ಳಿಯಲ್ಲಿ ನಡೆದಿದೆ.
ದೂಪನಹಳ್ಳಿಯ ನಿವಾಸಿ ಮುನಿಕೃಷ್ಣ (70) ಕೊಲೆಯಾದ ದುರ್ದೈವಿ. ಇವರ ಸ್ವಂತ ಪುತ್ರರಾದ ಮೋಹನ್ ಕುಮಾರ್ ಮತ್ತು ಗಜೇಂದ್ರ ಅವರೇ ಈ ಕೃತ್ಯ ಎಸಗಿದ ಆರೋಪಿಗಳು. ಆಸ್ತಿ ಹಂಚಿಕೆ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ತಂದೆ ಮತ್ತು ಮಕ್ಕಳ ನಡುವೆ ತೀವ್ರ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಇದೇ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪುತ್ರರು ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮುನಿಕೃಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳಾದ ಮೋಹನ್ ಕುಮಾರ್ ಮತ್ತು ಗಜೇಂದ್ರ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

