HomeKarnatakaಉರ್ದು ಭಾಷೆಯಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು: ಮೌನ ಮುರಿದ ಸಿದ್ದರಾಮಯ್ಯ

ಉರ್ದು ಭಾಷೆಯಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು: ಮೌನ ಮುರಿದ ಸಿದ್ದರಾಮಯ್ಯ

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಜಾಹೀರಾತು ಉರ್ದು ಭಾಷೆಯಲ್ಲಿ ಪ್ರಕಟವಾಗಿದ್ದು ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ವಿವಿಧ ಸಂಘಟನೆಗಳ ಸದಸ್ಯರು, ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಟೀಕಿಸಿದೆ.

ಗುರುವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ಮುರಿದಿದ್ದು, ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ವಿವರಣೆ ನೀಡಿದ್ದಾರೆ. ‘ಉರ್ದು ಪತ್ರಿಕೆಯಲ್ಲಿ ಸರ್ಕಾರದ ಜಾಹೀರಾತೊಂದು ಉರ್ದು ಭಾಷೆಯಲ್ಲಿ ಪ್ರಕಟಗೊಂಡಿದ್ದನ್ನು ವಿರೋಧಿಸಿ ವಿಪಕ್ಷಗಳ ನಾಯಕರು ಆಡಿರುವ ವೀರಾವೇಶದ ಮಾತುಗಳನ್ನು ಆಲಿಸಿದೆ’ ಎಂದು ಹೇಳಿದ್ದಾರೆ.

‘ಹಿಂದೆ ತಾವೇ ಅಧಿಕಾರದಲ್ಲಿ ಇದ್ದಾಗ ಉರ್ದು ಭಾಷೆಯ ಜಾಹೀರಾತು ನೀಡಿ, ಈಗ ನಮ್ಮ ವಿರುದ್ಧ ಮುಗಿಬೀಳುವುದು ಆತ್ಮವಂಚನೆ ಮತ್ತು ಅಸಹ್ಯದ ಪರಮಾವಧಿ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಯಾರ ಓಲೈಕೆ ಮಾಡಲು ಉರ್ದು ಜಾಹೀರಾತು ನೀಡಿದ್ದರು? ಎಂದು ಹೇಳಿ ಪುಣ್ಯಕಟ್ಟಿಕೊಳ್ಳಿ’ ಎಂದು ತಿರುಗೇಟು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದಲೇ ಸರ್ಕಾರ ಜಾಹೀರಾತು ನೀಡುತ್ತದೆ. ಹೆಚ್ಚೆಚ್ಚು ಜನರನ್ನು ತಲುಪುತ್ತದೆ ಎನ್ನುವ ಕಾರಣಕ್ಕಾಗಿ ಆಯಾ ಭಾಷೆಯ ಪತ್ರಿಕೆಗಳಲ್ಲಿ ಅದೇ ಭಾಷೆಯ ಜಾಹೀರಾತು ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಇದರಿಂದ ಪತ್ರಿಕೆಯ ಓದುಗರಿಗೆ ಜಾಹೀರಾತಿನ ವಿಚಾರ ಅರ್ಥವಾಗಿ, ಜಾಹೀರಾತು ನೀಡಿದ ಉದ್ದೇಶವೂ ಈಡೇರುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಬಿಜೆಪಿ ಕರ್ನಾಟಕದ ನಾಯಕರು ಒಂದಲ್ಲ, ಎರಡಲ್ಲ ಹತ್ತಾರು ಬಾರಿ ಉರ್ದು ಜಾಹೀರಾತುಗಳನ್ನು ನೀಡಿದ್ದಾರೆ, ಆಗ ಅವರಿಗೆ ಅದು ತುಷ್ಟೀಕರಣ ಅನ್ನಿಸಲಿಲ್ಲ. ಈಗ ನಮ್ಮ ಸರ್ಕಾರ ನೀಡಿರುವ ಉರ್ದು ಜಾಹೀರಾತು ಕಂಡೊಡನೆ ಅವರೊಳಗಿನ ಕನ್ನಡಪ್ರೇಮ ಇದ್ದಕ್ಕಿದ್ದಂತೆ ಎದ್ದುನಿಂತಿದೆ. ನಿಮ್ಮ ಈ ‘ಹಿಪೋಕ್ರಸಿ’ ಗೋಸುಂಬೆಯನ್ನೇ ನಾಚಿಸುವಂತಿದೆ’ ಎಂದು ಟೀಕಿಸಿದ್ದಾರೆ.

‘ನೆಲ, ಜಲ, ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು, ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾನು. ಇದಕ್ಕೆ ಇತಿಹಾಸ ಸಾಕ್ಷಿ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿಯೇ ರಾಜಕೀಯ ಜೀವನಕ್ಕೆ ಕಾಲಿರಿಸಿದ ನನಗೆ ಕನ್ನಡ ಬರಿ ಭಾಷೆಯಲ್ಲ, ಬದುಕು ಹೌದು. ಜೈ ಕರ್ನಾಟಕ, ಜೈ ಕನ್ನಡ’ ಎಂದು ಪೋಸ್ಟ್ ಹಾಕಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular