ಅಂತರರಾಷ್ಟ್ರೀಯ ಬಾಲಕಿಯರ ದಿನದ (ಅಕ್ಟೋಬರ್ 11) ವಿಶೇಷ ಸಂದರ್ಭದಲ್ಲಿ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಏಜೆನ್ಸಿಯಾದ ಯುನಿಸೆಫ್ ಇಂಡಿಯಾ (UNICEF India) ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧನಾ ಅವರನ್ನು ತನ್ನ ‘ಸೆಲೆಬ್ರಿಟಿ ಅಡ್ವೊಕೇಟ್’ (Celebrity Advocate) ಆಗಿ ಅಧಿಕೃತವಾಗಿ ನೇಮಿಸಿದೆ. ಬಾಲಕಿಯರ ಹಕ್ಕುಗಳು, ರಕ್ಷಣೆ, ನಾಯಕತ್ವ ಹಾಗೂ ಯುವಜನರ ಸಮಾನ ಅವಕಾಶಗಳಿಗಾಗಿ ಸ್ಮೃತಿ ಮಂಧನಾ ಧ್ವನಿಯಾಗಲಿದ್ದಾರೆ.
ಕ್ರೀಡಾ ಲೋಕದಲ್ಲಿ ಯುವ ಯುವತಿಯರಿಗೆ ಪ್ರಮುಖ ಮಾದರಿಯಾಗಿರುವ ಸ್ಮೃತಿ ಮಂಧನಾ, ಬಾಲಕಿಯರಿಗೆ ಕ್ರೀಡೆ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶಗಳು ದೊರಕುವಂತೆ ಶ್ರಮಿಸಲಿದ್ದಾರೆ. ಯುನಿಸೆಫ್ ಇಂಡಿಯಾದ ಈ ಮಹತ್ವದ ಅಭಿಯಾನದ ಮೂಲಕ ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಅವರು ಕೈಜೋಡಿಸಲಿದ್ದಾರೆ. ಈ ಕುರಿತು ಮಾತನಾಡಿದ ಸ್ಮೃತಿ ಮಂಧನಾ, “ಚಿಕ್ಕವಳಿದ್ದಾಗ ಕ್ರಿಕೆಟ್ ಆಡುವುದು ಪ್ರತಿಯೊಂದು ಕನಸಿಗೆ ಅವಕಾಶದಿಂದಲೇ ಆರಂಭವಾಗುತ್ತದೆ ಎಂಬ ಪಾಠ ಕಲಿಸಿತು. ಕಠಿಣ ಪರಿಶ್ರಮ ಮತ್ತು ಪ್ರೋತ್ಸಾಹದಿಂದ ಆ ಅವಕಾಶವು ಅಸಾಧಾರಣ ಸಾಧನೆಯಾಗಿ ಬದಲಾಗುತ್ತದೆ. ಪ್ರತಿಯೊಬ್ಬ ಮಗುವಿಗೂ ದೊಡ್ಡ ಕನಸು ಕಾಣುವ ಮತ್ತು ತಮ್ಮ ಪೂರ್ಣ ಸಾಮರ್ಥ್ಯವನ್ನು ಸಾಧಿಸುವ ಹಕ್ಕಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅರ್ಜುನ ಪ್ರಶಸ್ತಿ ವಿಜೇತೆಯಾಗಿರುವ ಸ್ಮೃತಿ ಮಂಧನಾ, 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ವಿಶ್ವದ ನಂ. 1 ಒಡಿಐ ಬ್ಯಾಟರ್ ಆಗಿರುವ ಅವರು, ಎರಡು ಬಾರಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯುನಿಸೆಫ್ ಇಂಡಿಯಾದ ಪ್ರತಿನಿಧಿ ಸಿಂಥಿಯಾ ಮೆಕಾಫ್ರಿ ಮಾತನಾಡಿ, ಸ್ಮೃತಿ ಮಂಧನಾ ಅವರ ಯಶಸ್ಸಿನ ಪ್ರಯಾಣವು ಪ್ರತಿಭಾವಂತ ಹೆಣ್ಣುಮಕ್ಕಳಿಗೆ ದೊಡ್ಡ ಸ್ಪೂರ್ತಿಯಾಗಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಹದಿಹರೆಯದವರ ಸಬಲೀಕರಣಕ್ಕಾಗಿ ಯುನಿಸೆಫ್ ನಡೆಸುತ್ತಿರುವ ಕಾರ್ಯಗಳಿಗೆ ಈ ನೇಮಕವು ಮತ್ತಷ್ಟು ಬಲ ತುಂಬಲಿದೆ.

