ನೇಪಾಳದ ಸೋಲುಖುಂಬು ಜಿಲ್ಲೆಯ ಫೆರಿಚೆ ಪ್ರದೇಶದಲ್ಲಿ ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ವಿದೇಶಿ ಪ್ರಜೆ ಮೃತಪಟ್ಟಿದ್ದು, ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿದ್ದಾರೆ.
ನೇಪಾಳದ ಹಿಮಾಲಯ ಪರ್ವತ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ. ಸೋಲುಖುಂಬು ಜಿಲ್ಲೆಯ ಖುಂಬು ಪಸಾಂಗ್ ಲ್ಹಾಮು ಗ್ರಾಮೀಣ ಪುರಸಭೆಯ ವಾರ್ಡ್ 4ರಲ್ಲಿರುವ ಫೆರಿಚೆ ಪ್ರದೇಶದಲ್ಲಿ ಇಳಿಯುವ ವೇಳೆ ಏರ್ ಡೈನಾಸ್ಟಿ (Air Dynasty) ಮತ್ತು ಫಿಶ್‌ಟೇಲ್ ಏರ್ (Fishtail Air) ಸಂಸ್ಥೆಗಳಿಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದಿವೆ.
ಮಂಗಳವಾರ ಬೆಳಗ್ಗೆ ಸುಮಾರು 8:11ಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿ ತಿಳಿಸಿದೆ. ಘಟನೆಯಲ್ಲಿ ಓರ್ವ ವಿದೇಶಿ ಪ್ರಜೆ ಮೃತಪಟ್ಟಿದ್ದು, ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿದ್ದಾರೆ.
ಮೃತ ವಿದೇಶಿ ಪ್ರಜೆಯ ಗುರುತು ಪತ್ತೆಯಾಗಿಲ್ಲ
ಮೃತ ವಿದೇಶಿ ಪ್ರಜೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಮಾಹಿತಿ ಅಧಿಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ಮೌಸಮ್ ತಮಾಂಗ್ ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕನನ್ನು ಪ್ರಭು ಏರ್‌ನ ಹೆಲಿಕಾಪ್ಟರ್ ಮೂಲಕ ಲುಕ್ಲಾಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಗಾಯಗೊಂಡ ವ್ಯಕ್ತಿಯ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ, ಎರಡೂ ಹೆಲಿಕಾಪ್ಟರ್‌ಗಳಲ್ಲಿದ್ದ ಇತರ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸ್ಥಿತಿಗತಿಯ ಬಗ್ಗೆಯೂ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ.
ಅಪಘಾತಕ್ಕೆ ಕಾರಣವೇನು?
ಹಿಮಾಲಯದ ಫೆರಿಚೆ ಪ್ರದೇಶದಲ್ಲಿ ಸಂಭವಿಸಿದ ಈ ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.
*ಉತ್ತರಾಖಂಡ್ ನಲ್ಲಿ ಹೆಲಿಕಾಪ್ಟರ್ ದುರಂತ
ಬದರಿನಾಥದ ದರ್ಶನ ಮುಗಿಸಿ ಸಂತೋಷದಿಂದ ತವರಿಗೆ ಮರಳಬೇಕಿದ್ದ ಐವರು ಕನ್ನಡಿಗರ ಪಾಲಿಗೆ ವಿಧಿ ಕ್ರೂರವಾಗಿ ಪರಿಣಮಿಸಿದೆ. ದೇವರ ಸನ್ನಿಧಿಯಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಭೀಕರ ಅಪಘಾತಕ್ಕೀಡಾಗಿ ಆರು ಮಂದಿಯ ಪ್ರಾಣಪಕ್ಷಿ ಹಾರಿಹೋಗಿದೆ. ಕುಟುಂಬಸ್ಥರು ತಮ್ಮವರ ಸುರಕ್ಷಿತ ಆಗಮನಕ್ಕಾಗಿ ಕಾಯುತ್ತಿದ್ದರೆ, ಅತ್ತ ಉತ್ತರಾಖಂಡದ ದುರ್ಗಮ ಬೆಟ್ಟಗಳಲ್ಲಿ ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು.
ಅಕ್ಟೋಬರ್ 30ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಸಮೀಪದ ಚಾಯ್ ಗ್ರಾಮದ ಬಳಿಯ ಗುಡ್ಡ ಪ್ರದೇಶದಲ್ಲಿ ಈ ಹೃದಯವಿದ್ರಾವಕ ಘಟನೆ ಸಂಭವಿಸಿತ್ತು. ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್ ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಾ ಹೆಲಿಪ್ಯಾಡ್‌ಗೆ ತೆರಳುತ್ತಿತ್ತು. ಮಧ್ಯಾಹ್ನ ಸುಮಾರು 1.14ರ ವೇಳೆಗೆ ಹೆಲಿಕಾಪ್ಟರ್‌ನ ಸಂಪರ್ಕ ರಾಡಾರ್‌ನಿಂದ ಕಡಿತಗೊಂಡಿತ್ತು.
ತಕ್ಷಣವೇ ಹುಡುಕಾಟ ಆರಂಭಿಸಿದ ರಕ್ಷಣಾ ತಂಡಗಳಿಗೆ ಚಾಯ್ ಗ್ರಾಮದ ಸಮೀಪದ ಗುಡ್ಡದಲ್ಲಿ ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿದ್ದವು. ಆದರೆ, ಅಷ್ಟರಲ್ಲಾಗಲೇ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸೇರಿದಂತೆ ಆರು ಮಂದಿ ಮೃತಪಟ್ಟಿರುವುದು ದೃಢಪಟ್ಟಿತ್ತು.
ಈ ದುರಂತದಲ್ಲಿ ಮೃತಪಟ್ಟ ಆರು ಮಂದಿಯಲ್ಲಿ ಐವರು ಕರ್ನಾಟಕದವರಾಗಿದ್ದಾರೆ. ಮತ್ತೊಬ್ಬರು ದೆಹಲಿಯ ಪೈಲಟ್ ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ (48) ಎಂದು ವರದಿಯಾಗಿದೆ. ಮೃತ ಪ್ರಯಾಣಿಕರನ್ನು ಪ್ರತಾಪ್ (41), ಅರುಣ್ ಸಾಲುಂಕೆ (44), ವಿ.ಬಿ. ಶಂಕರ ಗೌಡ (39), ವಕೀಲ ಸುಧೀರ್ ಕೆ. (50) ಮತ್ತು ಎಚ್.ಎಸ್. ನಟರಾಜ (51) ಎಂದು ಗುರುತಿಸಲಾಗಿದೆ.
ಮೃತದೇಹಗಳಿಗಾಗಿ ಬೆಟ್ಟದ ನಡುವೆ ರಕ್ಷಣಾ ಸಿಬ್ಬಂದಿಯ ಸಾಹಸ!
ಅಪಘಾತ ಸಂಭವಿಸಿದ ಪ್ರದೇಶ ಸಾಮಾನ್ಯ ಸ್ಥಳವಾಗಿರಲಿಲ್ಲ. ಸುತ್ತಲೂ ಎತ್ತರದ ಬೆಟ್ಟಗಳು, ಕಡಿದಾದ ಹಾದಿಗಳು, ದುರ್ಗಮ ಭೂಪ್ರದೇಶ. ಇಂತಹ ಪ್ರದೇಶದಲ್ಲಿ ಮೃತದೇಹಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹೊರತರುವುದು ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು.
ಒಂದೆಡೆ ಪ್ರತಿಕೂಲ ಹವಾಮಾನ, ಮತ್ತೊಂದೆಡೆ ಕಠಿಣ ಪರ್ವತ ಹಾದಿಗಳು. ಆದರೂ ಕಾರ್ಯಾಚರಣೆಯಿಂದ ಹಿಂದೆ ಸರಿಯದ ರಕ್ಷಣಾ ಸಿಬ್ಬಂದಿ ಬೆಟ್ಟಗಳ ನಡುವೆ ಕಾಲ್ನಡಿಗೆಯಲ್ಲೇ ಸಾಗಿದರು. ಭಾರತೀಯ ಸೇನೆ, ಇಂಡೋ-ಟಿಬೆಟನ್ ಗಡಿ ಪೊಲೀಸ್ (ITBP), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಉತ್ತರಾಖಂಡ ಪೊಲೀಸರು, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಒಟ್ಟಾಗಿ ಕಾರ್ಯಾಚರಣೆ ನಡೆಸಿದರು.
24 ಗಂಟೆಗೂ ಹೆಚ್ಚು ಕಾಲ ನಡೆದ ಸತತ ಪ್ರಯತ್ನದ ಬಳಿಕ ಎಲ್ಲಾ ಆರು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆಯಲಾಯಿತು. ಬಳಿಕ ಜೋಶಿಮಠದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ, ಅಗತ್ಯ ಪ್ರಕ್ರಿಯೆಗಳ ನಂತರ ರಿಷಿಕೇಶದ ಏಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.

