ವಿಜಯವಾಡ: ಮುರಸು ತೀವ್ರ ಚಂಡಮಾರುತವು ಇಂದು (ನವೆಂಬರ್ 3, ಮಂಗಳವಾರ) ದಕ್ಷಿಣ ಆಂಧ್ರಪ್ರದೇಶದ ಒಂಗೋಲು ಸಮೀಪ ಕರಾವಳಿಯನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ನೆಲ್ಲೂರು ಮತ್ತು ನರಸಾಪುರ ನಡುವಿನ ಪ್ರದೇಶದಲ್ಲಿ ಚಂಡಮಾರುತದ ಕೇಂದ್ರ ಭಾಗ ಭೂಭಾಗವನ್ನು ಪ್ರವೇಶಿಸಿದ್ದು, ಅದರ ಸುತ್ತಲಿನ ಪ್ರಬಲ ಮೋಡಗಳ ವಲಯವೂ ಒಳನಾಡಿನತ್ತ ಚಲಿಸುತ್ತಿದೆ.
ಚಂಡಮಾರುತದ ಪ್ರಭಾವದಿಂದ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಕೆಲವು ಕಡೆ ಗಾಳಿಯ ವೇಗ ಗಂಟೆಗೆ 120 ಕಿ.ಮೀ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ 12 ಗಂಟೆಗಳಲ್ಲಿ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನೂ ನೀಡಲಾಗಿದೆ.
ಇದರ ಜೊತೆಗೆ ಸಮುದ್ರದಲ್ಲಿ ಸಾಮಾನ್ಯಕ್ಕಿಂತ 1ರಿಂದ 1.5 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಆಂಧ್ರಪ್ರದೇಶದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಬಾಪಟ್ಲ, ಕೃಷ್ಣ ಮತ್ತು ಪ್ರಕಾಶಂ ಜಿಲ್ಲೆಗಳ ಕರಾವಳಿ ಭಾಗಗಳಲ್ಲಿ ಈಗಾಗಲೇ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ.
https://x.com/PTI_News/status/2117427190728167646?s=20
ಆಂಧ್ರ, ತಮಿಳುನಾಡಿನಲ್ಲಿ ಭಾರೀ ಮಳೆ ಆತಂಕ
ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಭಾರಿ ಮಳೆಯಾಗಿದೆ. ಮುರಸು ಚಂಡಮಾರುತದ ಪರಿಣಾಮವಾಗಿ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಮತ್ತು ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಚಂಡಮಾರುತದ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಸಮುದ್ರದ ಅಲೆಗಳ ಅಬ್ಬರವೂ ತಗ್ಗುವ ನಿರೀಕ್ಷೆಯಿದೆ.
ಇತ್ತೀಚೆಗಷ್ಟೇ ಅರ್ನಾಬ್ ಚಂಡಮಾರುತದ ಪರಿಣಾಮ ಎದುರಿಸಿದ್ದ ಆಂಧ್ರಪ್ರದೇಶಕ್ಕೆ ಇದೀಗ ಮತ್ತೊಂದು ಚಂಡಮಾರುತದ ಆತಂಕ ಎದುರಾಗಿದೆ. ಅರ್ನಾಬ್ ಚಂಡಮಾರುತದಿಂದ ತಮಿಳುನಾಡು ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಹಾನಿಯಾಗಿತ್ತು. ಮುರಸು ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಕರಾವಳಿ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ಆರಂಭಿಸಿದೆ.
ಕರ್ನಾಟಕಕ್ಕೆ ಏನು ಪರಿಣಾಮ?
ಮುರಸು ಚಂಡಮಾರುತದ ಪ್ರಭಾವ ಕರ್ನಾಟಕದಲ್ಲೂ ಕಂಡುಬರುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಮಲೆನಾಡಿನ ಕೆಲವು ಭಾಗಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 6ರವರೆಗೆ ಮಳೆಯಾಗುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳ ನಿವಾಸಿಗಳು ಹವಾಮಾನ ಇಲಾಖೆಯ ಮುನ್ಸೂಚನೆ ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಆಂಧ್ರ ಸರ್ಕಾರದಿಂದ ವಾಟ್ಸಪ್ ಹೆಲ್ಪ್ಲೈನ್
ಮುರಸು ಚಂಡಮಾರುತವನ್ನು ಎದುರಿಸಲು ಆಂಧ್ರಪ್ರದೇಶ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ಜನರಿಗೆ ತುರ್ತು ಮಾಹಿತಿ ಮತ್ತು ನೆರವು ಒದಗಿಸುವ ಉದ್ದೇಶದಿಂದ ‘ಮನಮಿತ್ರ’ ಹೆಸರಿನ ವಾಟ್ಸಪ್ ಹೆಲ್ಪ್ಲೈನ್ ವ್ಯವಸ್ಥೆಯನ್ನೂ ಆರಂಭಿಸಲಾಗಿದೆ. ಚಂಡಮಾರುತದ ಪರಿಣಾಮ ಎದುರಿಸಲು ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.

