ಬೆಂಗಳೂರು: ಉಮರ್ ಖಾಲಿದ್ ರಾಷ್ಟ್ರೀಯವಾದಿ ಎಂಬ ತಮ್ಮ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಹೇಳಿಕೆ ಬಗ್ಗೆ ವಿಪಕ್ಷ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಸಂವಿಧಾನದ ಚೌಕಟ್ಟಿನಲ್ಲಿ, ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಇರೋ ವಿಚಾರ. ಯಾರು ಸಂವಿಧಾನದ ವಿರೋಧಿಗಳು, ಯಾರು ತ್ರಿವರ್ಣ ಧ್ವಜದ ವಿರೋಧಿಗಳು, ರಾಷ್ಟ್ರಗೀತೆ ವಿರೋಧಿಗಳು, ಯಾರು ಖಾಕಿ ಚಡ್ಡಿ, ಕರಿ ಟೋಪಿ ಹಾಕಿ ದೊಣ್ಣೆ ಹಿಡಿದುಕೊಂಡು ಶಾಖೆಯಲ್ಲಿ ರಾಷ್ಟ್ರಗೀತೆ ಹಾಡೋದಿಲ್ಲ ಅವರು ದೇಶದ್ರೋಹಿಗಳು ಎಂದು ಪರೋಕ್ಷವಾಗಿ ಆರ್.ಎಸ್.ಎಸ್ ವಿರುದ್ಧ ಕಿಡಿಕಾರಿದರು.
ನಮ್ಮ ಉಮರ್ ಖಾಲಿದ್ ಎಲ್ಲೂ ಸಂವಿಧಾನ ವಿರೋಧವಾಗಿ ಮಾತಾಡಿಲ್ಲ. ತ್ರಿವರ್ಣ ಧ್ವಜದ ವಿರುದ್ದ ಮಾತಾಡಿಲ್ಲ. 6 ವರ್ಷ ಅಕ್ರಮವಾಗಿ ಜೈಲಿನಲ್ಲಿ ಇದ್ದರು ನ್ಯಾಯಾಲಯದ ವಿರುದ್ದ ಮಾತಾಡಿಲ್ಲ. ನ್ಯಾಯಾಲಯದ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಉಮರ್ ಖಾಲಿದ್ ಗೆ ಬಿಜೆಪಿ ಅವರ ಸರ್ಟಿಫಿಕೇಟ್ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಜೆ.ಪಿ ನಡ್ಡಾ ಆಗಲಿ, ಮರಿ ಯಡಿಯೂರಪ್ಪ ಆಗಲಿ ಬಿಜೆಪಿಯ ಯಾರೇ ಅಗಲಿ ಇವರುಗಳು ನ್ಯಾಯಾಧೀಶರಲ್ಲ. ಬಿಜೆಪಿ ಕಚೇರಿ ನ್ಯಾಯಾಲಯ ಅಲ್ಲ. ಉಮರ್ ಖಾಲಿದ್ ದೇಶದ್ರೋಹಿ ಅಂದರೆ ಅದನ್ನು ನ್ಯಾಯಾಲಯ ಹೇಳಬೇಕು. ಬಿಜೆಪಿಯವರು ಹೇಳುವುದಲ್ಲ. ಇವರ ಯೋಗ್ಯತೆಗೆ ಉಮರ್ ಖಾಲಿದ್ ವಿರುದ್ಧ ಎಫ್ಐಆರ್ ಮಾಡೋಕೆ ಆಗಿಲ್ಲ. ಚಾರ್ಜ್ ಶೀಟ್ ಹಾಕಿಲ್ಲ. ಬಿಜೆಪಿ ಅವರಿಗೆ ಯೋಗ್ಯತೆ ಇದ್ದರೆ ,ಸಂವಿಧಾನದ ಮೇಲೆ ಗೌರವ ಇದ್ದರೆ ಒಬ್ಬ ನಾಗರೀಕನನ್ನ 6 ವರ್ಷಗಳ ಕಾಲ ಅಕ್ರಮವಾಗಿ ಬಂಧನ ಮಾಡಿರೋದು ನಾವು ಖಂಡಿಸುತ್ತೇವೆ ಎಂದು ಗುಡುಗಿದರು.
ಉಮರ್ ಖಾಲಿದ್ ರಾಷ್ಟ್ರೀಯವಾದಿ ಎಂಬ ಹರಿಪ್ರಸಾದ್ ಹೇಳಿಕೆ ರಾಷ್ಟ್ರಘಾತುಕ ಹೇಳಿಕೆ ಎಂಬ ಬಿಜೆಪಿಯ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರದ್ರೋಹಿಗಳೆಲ್ಲಾ ಹಾಗೇ ಹೇಳೋದು ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವ ಮುರಳೀಧರ ಮೋಹೋಲ್ ಬೆಂಗಾವಲು ವಾಹನ ಓವರ್ ಟೇಕ್ ಮಾಡಿದ ಆರೋಪ: ಬೈಕ್ ಸವಾರನ ವಿರುದ್ಧ FIR ದಾಖಲು
ಮುಂಬೈ: ಕೇಂದ್ರ ಸಚಿವರೊಬ್ಬರ ಬೆಂಗಾವಲು ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೆ ಬೈಕ್ ಸವಾರನೊಬ್ಬನಿಗೆ ಸಂಕಷ್ಟ ಎದುರಾಗಿದೆ. ಬೈಕ್ ಸವಾರನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೇಂದ್ರ ಸಚಿವ ಮುರಳೀಧರ್ ಮೋಹೋಲ್ ಅವರ ಬೆಂಗಾವಲು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿ ಓವರ್ ಟೇಕ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೈಕ್ ಸವಾರನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶನಿವಾರ ರಾತ್ರಿ ಸುಮಾರು 8:30ರ ವೇಳೆಗೆ ಪುಣೆ ನಗರದ ಶಿವಾಜಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಮದ್ಯದ ಅಮಲಿನಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸುತ್ತಾ ಬೆಂಗಾವಲು ವಾಹನಗಳನ್ನು ಓವರ್ ಟೇಕ್ ಮಾಡಿರುವುದಾಗಿ ದೂರುನಲ್ಲಿ ಆರೋಪಿಸಲಾಗಿದೆ.
ಪುಣೆ ವಿಮಾನ ನಿಲ್ದಾಣದಿಂದ ಕೊತ್ರುಡ್ ಕಡೆಗೆ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಮುರಳೀಧರ್ ಮೋಹೋಲ್ ಅವರ ಬೆಂಗಾವಲು ವಾಹನಗಳು ಸಾಗುತ್ತಿದ್ದವು. ಬೆಂಗಾವಲು ವಾಹನಗಳು ಶಿವಾಜಿನಗರದ ಸಂಚೇತಿ ಚೌಕ್ ತಲುಪುತ್ತಿದ್ದಂತೆ, 32 ವರ್ಷದ ಆರೋಪಿ ಬೈಕ್ ಸವಾರನು ವಾಹನಗಳ ಮಧ್ಯೆ ಅಡ್ಡಾದಿಡ್ಡಿಯಾಗಿ ನುಗ್ಗಿ ಓವರ್ ಟೇಕ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಆತ ಮದ್ಯದ ಅಮಲಿನಲ್ಲಿದ್ದ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ಇತರರಿಗೆ ಅಪಾಯ ಉಂಟುಮಾಡುವ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡುವ ರೀತಿಯಲ್ಲಿ ಬೈಕ್ ಚಲಾಯಿಸುತ್ತಿದ್ದ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184, 185, 119 ಮತ್ತು 177ರ ಅಡಿಯಲ್ಲಿ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗೆ ನೋಟಿಸ್ ಜಾರಿ ಮಾಡಿದ ಬಳಿಕ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

