HomeAgricultureಧಾರವಾಡ ಜಿಲ್ಲೆಯಲ್ಲಿ 2,88,077.06 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ

ಧಾರವಾಡ ಜಿಲ್ಲೆಯಲ್ಲಿ 2,88,077.06 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ

ಧಾರವಾಡ: ಧಾರವಾಡ ಜಿಲ್ಲೆಯ 8 ಬರ ಪೀಡಿತ ತಾಲ್ಲೂಕುಗಳಿಗೆ ಸರ್ಕಾರದ ನಿರ್ದೇಶನದಂತೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳಿಂದ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಕೈಗೊಂಡು ಜಿಲ್ಲೆಯ ಅಂದಾಜು 2,88,077.06  ಹೆಕ್ಟರ್ ಬೆಳೆ ಹಾನಿಯಾದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮೀಕ್ಷೆಯಲ್ಲಿ 2,71,417.55 ಹೆಕ್ಟೆರ್ ಕೃಷಿ ಬೆಳೆ ಹಾನಿ, 16,659.51 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿ ಸೇರಿ ಒಟ್ಟು 2,88,077.06 ಹೆಕ್ಟೆರ್ ಬೆಳೆ ಹಾನಿಯಾಗಿರುತ್ತದೆ.

ಬೆಳೆ ಸಮೀಕ್ಷೆ: ಸರ್ಕಾರದ ನಿರ್ದೇಶನದಂತೆ, ಬೆಳೆ ಹಾನಿಯಾದ ರೈತರಿಗೆ ಬರ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತಿರುವುದರಿಂದ ರೈತರು ತಮ್ಮ ಸರ್ವೇ ನಂಬರ್‍ ನಲ್ಲಿ ಬೆಳೆದ ಬೆಳೆಯು ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ದಾಖಲಾಗಿರುವ ಬಗ್ಗೆ ಪರಿಶೀಲಿಸಿ, ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು. ಬೆಳೆಗಳ ಸಮೀಕ್ಷೆ ಮೇಲ್ವಿಚಾರಕರ ಪರಿಶೀಲನೆ ಅಕ್ಟೋಬರ್ 31, ಮರು ಸಮೀಕ್ಷೆ ನವೆಂಬರ್ 2, ಬೆಳೆಗಳ ಮರು ಸಮೀಕ್ಷೆ ಪರಿಶೀಲನೆ ನವೆಂಬರ್ 3, ಸಮೀಕ್ಷೆಯಾಗದ ತಾಕುಗಳಿಗೆ ಆಕ್ಷೇಪಣೆ ಸಲ್ಲಿಕೆ ನವೆಂಬರ್ 4 ಹಾಗೂ ನವೆಂಬರ್ 7 ರಂದು ಮಹಜರ್ ಆಪ್ ಮೂಲಕ ಆಕ್ಷೇಪಣೆ ಇತ್ಯರ್ಥಪಡಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈತರ ಗುರುತಿನ ಸಂಖ್ಯೆ: ಬೆಳೆ ಪರಿಹಾರ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ರೈತರು ತಮ್ಮ ಪ್ರತಿಯೊಂದು ಸರ್ವೆ ನಂಬರ್ ಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ, ರೈತರ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಎಫ್.ಐ.ಡಿ.ಯಾಗದಿದ್ದಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾದಕ ವಸ್ತುಗಳ ವ್ಯಸನ ತಡೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

ಧಾರವಾಡ: ಮಾದಕ ವಸ್ತುಗಳಿಗೆ ಒಮ್ಮೆ ವ್ಯಕ್ತಿ ವ್ಯಸನಿಯಾದರೆ, ಕ್ರಮೇಣ ಅದರ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾನೆ. ಹೆಚ್ಚು ಹೆಚ್ಚು ಮಾದಕ ವಸ್ತುಗಳನ್ನು ಸೇವಿಸಿದಂತೆ ವ್ಯಕ್ತಿ ಸಂಪೂರ್ಣವಾಗಿ ಜೀವನವನ್ನೇ ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ. ನಮ್ಮ ಸಹೋದರರು, ಮಕ್ಕಳು ಹಾಗೂ ಸಾರ್ವಜನಿಕರು ಮಾದಕ ವಸ್ತುಗಳಿಗೆ ವ್ಯಸನಿಗಳಾಗಬಾರದು ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್, ಅವರು ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ, ರೇಬಿಸ್ ನಿಯಂತ್ರಣ, ಹಾವು ಕಡಿತ ತಡೆಗಟ್ಟುವಿಕೆ, ಕ್ಷಯ ರೋಗ ನಿರ್ಮೂಲನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಮಕ್ಕಳು ಇಂತಹ ಚಟಗಳಿಗೆ ಬಲಿಯಾಗುತ್ತಿದ್ದರೆ, ಅದನ್ನು ನಿರ್ಲಕ್ಷಿಸುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚಾಗಿದೆ. ನಮ್ಮ ಮಕ್ಕಳು ಸುರಕ್ಷಿತವಾಗಿದ್ದರೆ ಸಾಕು, ಇತರರ ಮಕ್ಕಳಿಗೆ ಏನಾದರೂ ಆಗಲಿ ಎಂಬ ಮನೋಭಾವ ಬದಲಾಗಬೇಕು. ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಗಮನಿಸಿ, ಅವುಗಳನ್ನು ತಡೆಯಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ಹೇಳಿದರು.

20 ರಿಂದ 30 ವರ್ಷಗಳ ಹಿಂದೆ ಅಕ್ಕಪಕ್ಕದ ಮಕ್ಕಳು ತಪ್ಪಾಗಿ ವರ್ತಿಸಿದರೆ ಹಿರಿಯರು ಪ್ರಶ್ನಿಸಿ, ಅವರನ್ನು ತಿದ್ದುವ ಪ್ರಯತ್ನ ಮಾಡುತ್ತಿದ್ದರು. ಆದರೆ ಈಗ ಇತರರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವ ಮನೋಭಾವ ಕಡಿಮೆಯಾಗುತ್ತಿದೆ. ನಮ್ಮ ಮನೆಗೆ ಸಮಸ್ಯೆ ಎದುರಾಗುವವರೆಗೂ ನಾವು ಸುರಕ್ಷಿತವಾಗಿದ್ದೇವೆ ಎಂದು ಭಾವಿಸುತ್ತೇವೆ. ಸಮಾಜದ ಒಳಿತಿಗಾಗಿ ಎಲ್ಲರೂ ಜಾಗೃತರಾಗಬೇಕು ಎಂದು ಅವರು ಹೇಳಿದರು.

ಪೋಷಕರು ಮಕ್ಕಳನ್ನು ಎಷ್ಟೇ ಪ್ರೀತಿಯಿಂದ ಬೆಳೆಸಿದರೂ, ಅವರಿಗೆ ಉತ್ತಮ ಶಿಕ್ಷಣ ಮತ್ತು ಆರ್ಥಿಕ ಸೌಲಭ್ಯಗಳನ್ನು ಒದಗಿಸಿದರೂ, ಹೊರಗಿನ ಪರಿಸರದಲ್ಲಿ ಮಾದಕ ವಸ್ತುಗಳ ಸಂಪರ್ಕ ಪದೇಪದೇ ಎದುರಾದರೆ ಅವರು ವ್ಯಸನಕ್ಕೆ ಬಲಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಮಕ್ಕಳ ಚಟುವಟಿಕೆಗಳ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು. ತಮ್ಮ ಮಕ್ಕಳಷ್ಟೇ ಅಲ್ಲದೇ, ಸುತ್ತಮುತ್ತಲಿನ ಇತರ ಮಕ್ಕಳೂ ಇಂತಹ ಚಟಗಳಿಗೆ ಬಲಿಯಾಗದಂತೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿರುವುದಕ್ಕೆ ಜನರು ತಪ್ಪುಗಳನ್ನು ಕಂಡರೂ ಅವುಗಳನ್ನು ತಡೆಯಲು ಮುಂದಾಗದಿರುವುದು ಒಂದು ಕಾರಣವಾಗಿದೆ. ಹಿಂದೆ ಅಪರಾಧಗಳು ಇದ್ದರೂ, ಅವುಗಳನ್ನು ತಡೆಯಲು ಜನರು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಯತ್ನಿಸುತ್ತಿದ್ದರು. ಈಗ ಅಂತಹ ಜಾಗೃತಿ ಮತ್ತು ಹೊಣೆಗಾರಿಕೆಯ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ. ಸಮಾಜದಲ್ಲಿ ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇತರರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಸಮಾಜದಲ್ಲಿ ಬದಲಾವಣೆ ತರಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಒಬ್ಬ ವ್ಯಕ್ತಿಯ ಉತ್ತಮ ನಡೆ ಮತ್ತೊಬ್ಬರಿಗೆ ಪ್ರೇರಣೆಯಾಗಬಹುದು. ಅವರಿಂದ ಮತ್ತೊಬ್ಬರು ಪ್ರೇರಿತರಾಗುವ ಮೂಲಕ ಬದಲಾವಣೆಯ ಸರಪಳಿ ನಿರ್ಮಾಣವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಹೆಚ್ಚು ಜಾಗೃತರಾಗಿ, ಸಕ್ರಿಯವಾಗಿ ಸಮಾಜದ ಸಮಸ್ಯೆಗಳನ್ನು ತಡೆಯಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಅವರು ಹೇಳಿದರು.

ನಾಯಿ ಕಡಿತ, ಹಾವು ಕಡಿತ ಹಾಗೂ ಕ್ಷಯರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚನೆ:

ನಾಯಿ ಕಚ್ಚಿದ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾವು ಕಡಿತ ನಿಯಂತ್ರಣ ಹಾಗೂ ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಹಾವು ಕಡಿತವಾದ ತಕ್ಷಣ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಮತ್ತು ಜೀವ ರಕ್ಷಣಾ ಕ್ರಮಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮನೆಯ ಸಮೀಪ ಹಾವು ಕಂಡುಬಂದರೆ, ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಹಾವು ಕಡಿತದ ನಿರ್ವಹಣೆ, ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಣೆ ಕುರಿತು ಆರೋಗ್ಯ ಸಿಬ್ಬಂದಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಕ್ಷಯರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದ್ದರಿಂದ ಕ್ಷಯರೋಗದ ನಿರ್ಮೂಲನೆ ಕುರಿತು ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕ್ಷಯರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯ ವತಿಯಿಂದ ಸಿದ್ಧಪಡಿಸಲಾದ ಜಾಗೃತಿ ಭಿತ್ತಿಪತ್ರವನ್ನು (ಪೆÇೀಸ್ಟರ್) ಬಿಡುಗಡೆ ಮಾಡಲಾಯಿತು. ಕ್ಷಯರೋಗದ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಚಿಕಿತ್ಸೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಪರಶುರಾಮ ಎಫ್.ಕೆ., ಎಸಿಪಿ ಪ್ರಶಾಂತ ಸಿದ್ದನಗೌಡರ, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ. ರವೀಂದ್ರ ಆರ್. ಬೋವೇರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಎಸ್. ಬಿ. ಕಳಸೂರಮಠ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular