ಎಂಬಿಬಿಎಸ್ ವೈದ್ಯಾಧಿಕಾರಿಗಳಿಗೆ ಆರು ತಿಂಗಳ ಅಲ್ಟ್ರಾಸೋನೊಗ್ರಫಿ (Ultrasonography) ತರಬೇತಿ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯದ ತಾಯಿ ಮತ್ತು ಶಿಶು ಆರೋಗ್ಯ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಒಂದು ಪ್ರಮುಖ ಆದೇಶವನ್ನು ಹೊರಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ಹಲವಾರು ಜಿಲ್ಲಾ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆ ಇರುವುದನ್ನು ಗಮನಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಪ್ರಸವಪೂರ್ವ ಮತ್ತು ಪ್ರಸವೋತ್ತರ ಸೇವೆಗಳನ್ನು ನೀಡಲು ಆರೋಗ್ಯ ಇಲಾಖೆಯ ಸೇವಾನಿರತ ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳಿಗೆ ಆರು ತಿಂಗಳ ಅಲ್ಟ್ರಾಸೋನೊಗ್ರಫಿ (Ultrasonography) ತರಬೇತಿ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ತರಬೇತಿಯನ್ನು ಪಿಸಿ ಮತ್ತು ಪಿಎನ್‌ಡಿಟಿ (PC & PNDT) ಕಾಯ್ದೆ ಹಾಗೂ 2014ರ ತರಬೇತಿ ನಿಯಮಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ನಡೆಸಲಾಗುವುದು. ಈ ಮಹತ್ವದ ಕಾರ್ಯಕ್ರಮಕ್ಕಾಗಿ ರಾಜ್ಯದ ಒಟ್ಟು 11 ಆಸ್ಪತ್ರೆಗಳನ್ನು ತರಬೇತಿ ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಜಯನಗರ ಸಾರ್ವಜನಿಕ ಆಸ್ಪತ್ರೆ, ಮಂಗಳೂರಿನ ಲೇಡಿ ಘೋಷನ್ ಮತ್ತು ವೆನ್ಲಾಕ್ ಆಸ್ಪತ್ರೆ, ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಚಿಕ್ಕಬಳ್ಳಾಪುರ, ಧಾರವಾಡ, ತುಮಕೂರು, ವಿಜಯಪುರ, ಬಳ್ಳಾರಿ, ಕೋಲಾರ ಮತ್ತು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ತರಬೇತಿ ಲಭ್ಯವಿರಲಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
ಒಟ್ಟು 23 ಅಧ್ಯಾಪಕರ ಮಾರ್ಗದರ್ಶನದಲ್ಲಿ 69 ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲು ಗುರಿ ಹೊಂದಲಾಗಿದ್ದು, ಅಧ್ಯಾಪಕ ಮತ್ತು ವಿದ್ಯಾರ್ಥಿ ಅನುಪಾತವನ್ನು 1:3 ರಂತೆ ನಿಗದಿಪಡಿಸಲಾಗಿದೆ. ಈ ತರಬೇತಿಗೆ ಕೇವಲ ಇಲಾಖೆಯಲ್ಲಿ ಸೇವೆಯಲ್ಲಿರುವ ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳನ್ನು ಮಾತ್ರ ಪರಿಗಣಿಸಲಾಗುತ್ತಿದ್ದು, ಆಯ್ಕೆ ಪ್ರಕ್ರಿಯೆಯನ್ನು ಬಂಧಪತ್ರ ಕೋಶದ (Bond Enforcement Cell) ಸಮನ್ವಯದೊಂದಿಗೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ತರಬೇತಿ ಪಡೆದ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಅಲ್ಟ್ರಾಸೋನೊಗ್ರಫಿ ಸೇವೆಗಳನ್ನು ನೀಡಬೇಕೆಂದು ಷರತ್ತು ವಿಧಿಸಲಾಗಿದೆ. ಇನ್ನೂ ಈ ತರಬೇತಿಗೆ ನಿಯೋಜನೆಗೊಂಡ ವೈದ್ಯರ ಸ್ಥಾನಕ್ಕೆ ಸಾರ್ವಜನಿಕ ಸೇವೆಗೆ ಅಡ್ಡಿಯಾಗದಂತೆ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು (SIHFW) ಈ ಯೋಜನೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ನಿರ್ವಹಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತಾವನೆ ಏನಾಗಿತ್ತು?; ಈ ಆದೇಶದ ವಿಷಯ ಆಯ್ದ ಜಿಲ್ಲಾ ಆಸ್ಪತ್ರೆಗಳಲ್ಲಿ ಆರು ತಿಂಗಳ ಅಲ್ಟ್ರಾ ಸೋನೋಗ್ರಫಿ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಹಾಗೂ ಸದರಿ ತರಬೇತಿಗೆ ಇಲಾಖೆಯಲ್ಲಿನ ಸೇವಾನಿರತ ವೈದ್ಯರುಗಳನ್ನು ಪರಿಗಣಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಶಿಶುಗಳ ಆರೋಗ್ಯ ಸೇವೆಗಳಿಗೆ ಅಲ್ಟ್ರಾಸೋನೊಗ್ರಫಿ ಅತ್ಯಗತ್ಯ ಸಾಧನವಾಗಿದೆ. ಹಲವಾರು CEmONC ಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ, ರೇಡಿಯಾಲಜಿಸ್ಟ್‌ಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಸವಪೂರ್ವ ಮತ್ತು ಪ್ರಸವ ನಂತರದ ಸೇವೆಗಳನ್ನು ಬಲಪಡಿಸುವ ಸಲುವಾಗಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಮತ್ತು ಆರು ತಿಂಗಳ ತರಬೇತಿ ನಿಯಮಗಳು, 2014ರ ನಿಯಮಗಳ ಪ್ರಕಾರ ಇಲಾಖೆಯಲ್ಲಿನ ಸೇವಾನಿರತ ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳಿಗೆ ಅಲ್ಟ್ರಾಸೋನೊಗ್ರಫಿಯಲ್ಲಿ ತರಬೇತಿ ನೀಡಲು ಪ್ರಸ್ತಾಪಿಸಲಾಗಿದೆ,
ಅದರಂತೆ, ಇಲಾಖೆಯ 11 ಆಸ್ಪತ್ರೆಗಳಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞತೆಯಲ್ಲಿ DNB/ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿದ್ದು, ಅದರಲ್ಲಿ 9 ಜಿಲ್ಲಾ ಆಸ್ಪತ್ರೆಗಳಿದ್ದು, ಅವುಗಳು ಸಾಕಷ್ಟು ಅಲ್ಟ್ರಾಸೋನೊಗ್ರಫಿ ಕೆಲಸದ ಹೊರೆಯನ್ನು ಹೊಂದಿವೆ.
ಸದರಿ 9 ಜಿಲ್ಲಾ ಮಟ್ಟದ DNB/ ಡಿಪ್ಲೊಮಾ ಕೇಂದ್ರಗಳನ್ನು ಆರು ತಿಂಗಳ ಅಲ್ಟ್ರಾಸೋನೊಗ್ರಫಿ ತರಬೇತಿ ಕಾರ್ಯಕ್ರಮವನ್ನು ನಡೆಸಲು ಗುರುತಿಸಲಾಗಿದೆ. ಇದಲ್ಲದೆ, ಎರಡು ಜಿಲ್ಲಾಸ್ಪತ್ರೆಗೆ ಸೇರಿರುವ ಖಾಸಗಿ ವೈದ್ಯಕೀಯ ಕಾಲೇಜುಗಳಾದ ವೆನ್ಮಾಕ್ ಅಸ್ಪತ್ರೆ ಮತ್ತು ಲೇಡಿ ಘೋಷನ್ ಆಸ್ಪತ್ರೆ ಮಂಗಳೂರು ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ ಆಸ್ಪತ್ರೆಗಳಲ್ಲಿನ ರೇಡಿಯಾಲಜಿ ವಿಭಾಗಗಳು ಸಾಕಷ್ಟು ಅಧ್ಯಾಪಕರು, ಉಪಕರಣಗಳು ಮತ್ತು ಹೆಚ್ಚಿನ ಪ್ರಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಎರಡೂ ಆಸ್ಪತ್ರೆಗಳನ್ನು ಸಹ ಗುರುತಿಸಲಾಗಿದೆ.

