ಬೆಂಗಳೂರು: ಉದ್ಯಮಿ ಅರವಿಂದ್ ರೆಡ್ಡಿ ಹಾಗೂ ಸ್ಯಾಂಡಲ್ ವುಡ್ ನಟಿಯೊಬ್ಬರ ನಡುವಿನ ಕಿರಿಕ್ ವಿಚಾರಕ್ಕೆ ಸಂಬಂಧಿಸಿದಂತೆ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ರವಾನಿಸಿದ್ದ ವ್ಯಕ್ತಿಯನ್ನು ಬೆಂಗಳೂರಿನ ಹೆಚ್ ಎ ಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೈಶಾಕ್ ಬಂಧಿತ ಆರೋಪಿ. ತನಿಖೆ ವೇಳೆ ವೈಶಾಕ್, ನಟಿಯ ಸ್ನೇಹಿತ ಎಂಬುದು ಗೊತ್ತಾಗಿದೆ. ನಟಿಯ ಮನೆಯಲ್ಲಿಯೇ ಅಡಗಿ ಕುಳಿತಿದ್ದ ವೈಶಾಕ್ ನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಸ್ಯಾಂದಲ್ ವುಡ್ ನಟಿಯೊಂದಿಗೆ ಈ ಹಿಂದೆ ನಡೆದಿದ್ದ ಕಿರಿಕ್ ವಿಚಾರವಾಗಿ ಉದ್ಯಮಿ ಅರವಿಂದ್ ರೆಡ್ಡಿಗೆ ಪತ್ರ ಬರೆದಿದ್ದ ವೈಶಾಕ್, ಬೆದರಿಕೆ ಹಾಕಿದ್ದ. ಕ್ಷಮಾಪಣೆ ಪತ್ರದ ಜೊತೆಗೆ ನಟಿಗೆ ೭ ಕೋಟಿ ರೂಪಾಯಿ ಹಣ ನೀಡಬೇಕು ಎಂದು ಡಿಮಾಂಡ್ ಮಾಡಿದ್ದ. ಬ್ಲೂಡಾರ್ಟ್ ಕೊರಿಯರ್ ಮೂಲಕವಾಗಿ ಅರವಿಂದ್ ರೆಡ್ಡಿಗೆ ಪತ್ರ ಕಳುಹಿಸಿದ್ದ.
ಈ ಬಗ್ಗೆ ಅರವಿಂದ್ ರೆಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ವೈಶಾಕ್ ಪತ್ತೆಗೆ ಹುಡುಕಾಡಿದ್ದರು. ಈ ವೇಳೆ ಆತ ಜಯನಗರದಲ್ಲಿದ್ದಾನೆ ಎಂದು ತಿಳಿದುಬಂದಿತ್ತು. ಅಲ್ಲಿ ಪರಿಶೀಲಿಸಿದಾಗ ಆತ ಜಯನಗರದ ನಿವಾಸದಲ್ಲಿ ಇರಲಿಲ್ಲ. ಆತ ನಟಿಯ ಸ್ನೇಹಿತ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ನಟಿಯ ಮನೆಗೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದಾಗ ಆತ ಆಕೆಯ ಮನೆಯಲ್ಲಿಯೇ ಇರುವುದು ಗೊತ್ತಾಗಿದೆ. ತಕ್ಷಣ ವೈಶಾಕ್ ನನ್ನು ಬಂಧಿಸಿರುವ ಪೊಲೀಸರು ತನಿಖೆಗೆ ಕರೆದೊಯ್ದಿದ್ದಾರೆ.

