ಜೈಲು ಸೇರಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣ ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಇಮ್ರಾನ್ ಖಾನ್ ಅವರನ್ನು ಇಂದು ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ವೈದ್ಯಕೀಯ ವ್ಯವಸ್ಥೆಗಳ ಭಾಗವಾಗಿ ಡಾ. ಫೈಸಲ್ ಸುಲ್ತಾನ್ ಮತ್ತು ಡಾ. ಅಜ್ಮಾ ಖಾನ್ ಅವರೊಂದಿಗೆ ಆಸ್ಪತ್ರೆಗೆ ತೆರಳಲಿದ್ದಾರೆ. ಆಸ್ಪತ್ರೆಯಲ್ಲಿ ನಡೆಯುವ ಚಿಕಿತ್ಸೆಯ ವೆಚ್ಚವನ್ನು ಇಮ್ರಾನ್ ಖಾನ್ ಅವರೇ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಇಮ್ರಾನ್ ಖಾನ್ ಅವರ ಕುಟುಂಬಸ್ಥರು ಹಾಗೂ ವಕೀಲರು ವೈದ್ಯಕೀಯ ವರದಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಹಾಗೂ ತಮಗೆ ಆಯ್ಕೆಯ ವೈದ್ಯರಿಂದ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದರು. ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಯಲ್ಲಿ ಅವರ ವೈಯಕ್ತಿಕ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಬೇಕೆಂಬುದು ಅರ್ಜಿಯ ಪ್ರಮುಖ ಬೇಡಿಕೆಯಾಗಿತ್ತು.
ಇಮ್ರಾನ್ ಖಾನ್ ಅವರ ಆರೋಗ್ಯ, ವಿಶೇಷವಾಗಿ ದೃಷ್ಟಿ ಸಮಸ್ಯೆ ಕುರಿತು ಮತ್ತೊಮ್ಮೆ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಇಮ್ರಾನ್ ಖಾನ್ ಅವರ ವೈದ್ಯಕೀಯ ವರದಿಯಲ್ಲಿ ಏನಿದೆ?
ಅಡಿಯಾಲಾ ಜೈಲು ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವೈದ್ಯಕೀಯ ವರದಿಯಲ್ಲಿ ಇಮ್ರಾನ್ ಖಾನ್ ಅವರಿಗೆ ರಕ್ತದೊತ್ತಡದಲ್ಲಿ ಏರಿಳಿತ, ತಲೆನೋವು, ಚಡಪಡಿಕೆ, ಹೃದಯ ಬಡಿತ ವೇಗವಾಗುವುದು ಹಾಗೂ ತೀವ್ರ ಮಾನಸಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳಿರುವುದು ಉಲ್ಲೇಖಿಸಲಾಗಿದೆ.
2026ರ ಆಗಸ್ಟ್ 1ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನ PIMS ಆಸ್ಪತ್ರೆಯ ಹೃದ್ರೋಗ ತಜ್ಞ ಪ್ರೊಫೆಸರ್ ಡಾ. ಅಖ್ತರ್ ಅಲಿ ಬಂದಿಶಾ ಅವರು ಇಮ್ರಾನ್ ಖಾನ್ ಅವರನ್ನು ಪರೀಕ್ಷಿಸಿದ್ದರು. ಈ ವೇಳೆ ಅವರ ರಕ್ತದೊತ್ತಡ 140/100 mmHg ದಾಖಲಾಗಿತ್ತು.
ಇದಕ್ಕೂ ಮೊದಲು ಫೆಬ್ರವರಿ 2026ರಲ್ಲಿ ಇದೇ ವೈದ್ಯರು ಪರೀಕ್ಷಿಸಿದಾಗ ಅವರ ರಕ್ತದೊತ್ತಡ 120/80 mmHg ಇತ್ತು.
ಮಾನಸಿಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಇಮ್ರಾನ್ ಖಾನ್ ಅವರಿಗೆ ಪತ್ನಿಯೊಂದಿಗೆ ಹೆಚ್ಚಿನ ಸಮಯ ಭೇಟಿಯಾಗಲು ಅವಕಾಶ ನೀಡುವುದು ಹಾಗೂ ಸೂಕ್ತ ಓದುವ ಸಾಮಗ್ರಿಗಳನ್ನು ಒದಗಿಸುವಂತೆ ವೈದ್ಯಕೀಯ ಮಂಡಳಿ ಶಿಫಾರಸು ಮಾಡಿದೆ.
ಅಲ್ಲದೆ, ಹೃದಯದ ಸ್ಥಿತಿಯನ್ನು ಇನ್ನಷ್ಟು ಸಮಗ್ರವಾಗಿ ಪರಿಶೀಲಿಸಲು CT ಕೊರೊನರಿ ಆಂಜಿಯೋಗ್ರಫಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಹೆಚ್ಚಿದ ರಕ್ತದೊತ್ತಡ ನಿಯಂತ್ರಿಸಲು ಅವರ ಔಷಧದ ಪ್ರಮಾಣವನ್ನೂ ಹೆಚ್ಚಿಸಲಾಗಿದ್ದು, ನಾರ್ವಾಸ್ಕ್ 5 ಮಿ.ಗ್ರಾಂ ಅನ್ನು ಪ್ರತಿದಿನ ಬೆಳಗ್ಗೆ ಒಂದು ಬಾರಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಇನ್ನು ಇಮ್ರಾನ್ ಖಾನ್ ಅವರ ಬಲಗಣ್ಣಿನ ಸ್ಥಿತಿ ಚಿಕಿತ್ಸೆಯ ಬಳಿಕ ಸುಧಾರಿಸಿದ್ದು, ಅವರ ದೃಷ್ಟಿ “ಬಹುತೇಕ ಸಾಮಾನ್ಯ”ವಾಗಿದೆ ಎಂದು ಅಡಿಯಾಲಾ ಜೈಲು ಅಧಿಕಾರಿಗಳ ವರದಿ ಹೇಳಿದೆ. ಆದರೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಯಲ್ಲಿ ತಮ್ಮ ವೈಯಕ್ತಿಕ ವೈದ್ಯರ ಮೇಲ್ವಿಚಾರಣೆಯಲ್ಲೇ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದೆ.
ಒಟ್ಟಿನಲ್ಲಿ, ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಕುಟುಂಬಸ್ಥರು ಮತ್ತು ಬೆಂಬಲಿಗರ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

