140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಒಂದೇ ಹಂತದಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಎಡಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಡುವೆ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.
ಎಲ್‌ಡಿಎಫ್ ಈಗಾಗಲೇ ಸತತ ಎರಡು ಬಾರಿ ಚುನಾವಣೆ ಗೆದ್ದು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದು, ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದೆ. ಆದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈ ಬಾರಿ ಅಧಿಕಾರಕ್ಕೆ ಬರುವ ಭರವಸೆಯಲ್ಲಿದೆ.
ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ 100ಕ್ಕೂ ಅಧಿಕ ಸೀಟುಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇರಳ ಸಂಸದ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
“ಕೇರಳದಲ್ಲಿ ಯುಡಿಎಫ್ ಪರವಾಗಿ ಸ್ಪಷ್ಟ ಅಲೆ ಇದೆ. ಅಷ್ಟೇ ಅಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದ ಜನರು ಪ್ರಸ್ತುತ ಎಡರಂಗದ ಆಡಳಿತದಿಂದ ಬದಲಾವಣೆಯನ್ನು ಬಯಸುತ್ತಿದ್ದು, ಯುಡಿಎಫ್ ಅನ್ನು ಬೆಂಬಲಿಸುತ್ತಿದ್ದಾರೆ” ಎಂದು ತಿಳಿಸಿದರು.
“ಕೇರಳದಲ್ಲಿ ಯುಡಿಎಫ್ ಪರವಾಗಿ ಸ್ಪಷ್ಟವಾದ ಅಲೆಯು ಗೋಚರಿಸುತ್ತಿದೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರ ಸಾಕು ಎಂದು ಹೇಳುವ ಮನಸ್ಥಿತಿಗೆ ಜನರು ಈಗ ಬಂದಿದ್ದಾರೆ” ಎಂದು ವೇಣುಗೋಪಾಲ್ ಹೇಳಿದ್ದಾರೆ.
“ನೀವು ಯಾರನ್ನೇ ಕೇಳಿ ನಾನು ಕೇವಲ ಪಕ್ಷದ ಕಾರ್ಯಕರ್ತರ ಅಥವಾ ನಾಯಕರ ಬಗ್ಗೆ ಹೇಳುತ್ತಿಲ್ಲ, ಸಾಮಾನ್ಯ ಜನರನ್ನು ಕೇಳಿದರೂ ಸಾಕು ಮೂರನೇ ಅವಧಿಯ ಆಡಳಿತದ ಬಗ್ಗೆ ಪ್ರಶ್ನೆ ಕೇಳಿ ಮುಗಿಸುವ ಮೊದಲೇ ಅವರು ಬೇಡ ಎನ್ನುತ್ತಾರೆ” ಎಂದರು.
“ನಮಗೆ ಪೂರ್ಣ ವಿಶ್ವಾಸವಿದೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿದೆ. ಖಂಡಿತವಾಗಿಯೂ ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಗೆಲ್ಲಲಿದೆ. ನಾವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಕೇರಳ ಬದಲಾವಣೆಯನ್ನು ಬಯಸುತ್ತಿದೆ. ಕೇರಳದ ಜನರು ಬದಲಾವಣೆಗೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಆ ಬದಲಾವಣೆಯು ಚುನಾವಣಾ ಫಲಿತಾಂಶಗಳಲ್ಲಿ ಪ್ರತಿಫಲಿಸಲಿದೆ” ಎಂದು ಅವರು ತಿಳಿಸಿದರು.
2021ರ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ(ಎಂ) 62, ಕಾಂಗ್ರೆಸ್ 21, ಸಿಪಿಐ 17, ಐಉಎಂಎಲ್ 15, 6 ಪಕ್ಷೇತರರು, 19 ಇತರರು ಗೆಲುವು ಸಾಧಿಸಿದ್ದರು. ಎಡಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರ ರಚನೆ ಮಾಡಿತ್ತು. ಸತತ ಎರಡು ಚುನಾವಣೆಗಳಲ್ಲಿ ಜಯಗಳಿಸುವ ಮೂಲಕ ಎಲ್‌ಡಿಎಫ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ.

